ಮೋದಿ ಆಶಯದಂತೆ ದೇಶದ ರಫ್ತು ಜಗದಗಲ ವ್ಯಾಪಿಸಲಿ: ವ್ಯಾಪಾರೋದ್ಯಮಿಗಳಿಗೆ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಸಲಹೆ

India Family Business Summit 2022
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ರಫ್ತು ವಹಿವಾಟು ಜಗದಗಲ ವ್ಯಾಪಿಸಲಿ. ಜಗತ್ತಿಗೆ ರಫ್ತು ಮಾಡುವಂತಹ ಸಾಮರ್ಥ್ಯ ಭಾರತದ ವ್ಯಾಪಾರೋದ್ಯಮ ಕ್ಷೇತ್ರಕ್ಕಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹೇಳಿದರು.

ಎಫ್​ಕೆಸಿಸಿಐ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಫಿಕ್ಕಿ (ಎಫ್​ಐಸಿಸಿಐ) ಶುಕ್ರವಾರ ಆಯೋಜಿಸಿದ್ದ 'ಭಾರತ ವ್ಯಾಪಾರ ಕುಟುಂಬ-2022' ಶೃಂಗಸಭೆ ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿದರು.

ಯೂರೋಪ್​ನ ಸಣ್ಣ ದೇಶಗಳಿಂದ ಕರ್ನಾಟಕಕ್ಕೆ ಬಂದ ವ್ಯಾಪಾರ-ವಹಿವಾಟುದಾರರು ರಫ್ತಿನಲ್ಲಿ ಪ್ರಗತಿ ಸಾಧಿಸಿದ್ದಾರೆ. ದೇಶದ ವ್ಯಾಪಾರೋದ್ಯಮಿಗಳಲ್ಲಿ ಅದಕ್ಕಿಂತ ಹೆಚ್ಚು ಸಮರ್ಥರಾಗಿದ್ದು, ಸರಿಯಾಗಿ ಬಳಸಿಕೊಂಡು ಜಗತ್ತಿಗೆ ಹೆಚ್ಚು ರಫ್ತಾಗಬೇಕು ಎಂಬ ಮೋದಿ ಬಯಕೆ ಈಡೇರಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮುನ್ನಡೆಸಿರಿ: ದೇಶದ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುವುದಕ್ಕೆ ಚಿಕ್ಕ ವಯಸ್ಸಿನಲ್ಲಿ ಚಹಾ ಮಾರುತ್ತಿದ್ದುದೇ ಕಾರಣ. ತಾರುಣ್ಯದಲ್ಲಿ ಮಾಡುವ ಸಣ್ಣ ಕೆಲಸಗಳು ಶಕ್ತಿ- ಸಾಮರ್ಥ್ಯ, ಆತ್ಮವಿಶ್ವಾಸ ತುಂಬುತ್ತವೆ ಎಂದು ಡಾ.ವಿಜಯ ಸಂಕೇಶ್ವರ ಉದಾಹರಿಸಿದರು.

ವ್ಯಾಪಾರದಲ್ಲಿ ತಾವು ಬೆಳೆದ ಬಂದ ಬಗೆ, ತಮ್ಮ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ಶಿವ ಸಂಕೇಶ್ವರ ಅವರನ್ನು ಇಂಜಿನಿಯರಿಂಗ್ ವ್ಯಾಸಂಗ ಹಂತದಲ್ಲಿ ವ್ಯಾಪಾರ-ವಹಿವಾಟು ಕ್ಷೇತ್ರಕ್ಕೆ ಇಳಿಸಿರುವುದು, ಸಾಧಿಸಿದ ಪ್ರಗತಿಯನ್ನು ನಿದರ್ಶನವಾಗಿ ನೀಡಿದರು.

ಯಾವುದೇ ವ್ಯಾಪಾರ ಸಣ್ಣದು, ಸಂಪಾದನೆ ಕಡಿಮೆಯಿದೆ ಎಂದು ತಮ್ಮ ಮಕ್ಕಳನ್ನು ಬೇರೆ ಕಡೆ, ಉದ್ಯೋಗಕ್ಕೆ ಕಳುಹಿಸದೆ ಕೈಹಿಡಿದು ಮುನ್ನಡೆಸಿದರೆ ಯಶಸ್ವಿ ವ್ಯಾಪಾರಸ್ಥನಾಗಲು ಸಾಧ್ಯವಿದೆ ಎಂದು ಡಾ.ವಿಜಯ ಸಂಕೇಶ್ವರ ಹುರಿದುಂಬಿಸಿದರು.

ಫಿಕ್ಕಿ ಕರ್ನಾಟಕ ಶಾಖೆ ಚೇರ್ಮನ್ ಉಲ್ಲಾಸ ಕಾಮತ್, ಎಫ್​ಕೆಸಿಸಿಐ ಅಧ್ಯಕ್ಷ ಗೋಪಾಲರೆಡ್ಡಿ, ಬಿಸಿಸಿಐ ಚೇರ್ಮನ್ ಡಾ.ರವೀಂದ್ರನ್, ಚೇಂಬರ್ ಆಫ್ ಕಾಮರ್ಸ್ ಶಿವಮೊಗ್ಗದ ಎನ್.ಗೋಪಿನಾಥ್, ಪ್ರವೀಣ್ ಅಗಡಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net