

ಪ್ರಯಾಗರಾಜ್: ಆಸ್ಪತ್ರೆಯಲ್ಲಿ ಡೆಂಘೆ ರೋಗಿಯೊಬ್ಬರಿಗೆ ಪ್ಲಾಸ್ಮಾ ನೀಡುವ ಬದಲು ಮೂಸಂಬಿ ಜ್ಯೂಸ್ ಅನ್ನು ಡ್ರಿಪ್ ಮೂಲಕ ಕೊಟ್ಟ ಪರಿಣಾಮ ರೋಗಿ ಮೃತಪಟ್ಟಿದ್ದಾರೆ. ಆಸ್ಪತ್ರೆ ವಿರುದ್ಧ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರಿಂದ ಆಕ್ರೋಶ ಭುಗಿಲೇಳುತ್ತಿದ್ದಂತೆ ಆಸ್ಪತ್ರೆಯನ್ನ ಸೀಜ್ ಮಾಡಲಾಗಿದೆ.
ಇಂತಹ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ನ ಜಾಲ್ವಾ ಎಂಬಲ್ಲಿ ನಡೆದಿದೆ. ಪ್ರದೀಪ್ ಪಾಂಡೆ ಮೃತ ದುರ್ದೈವಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ನಕಲಿ ರಕ್ತ ನಿಧಿಗಳ ಅಕ್ರಮ ಬಯಲಾಗಿದೆ. ಪ್ಲಾಸ್ಮಾ ಪೊಟ್ಟಣದಲ್ಲಿ ಮೂಸಂಬಿ ರಸ ಇಟ್ಟಿರುವುದನ್ನು ಪತ್ರಕರ್ತರೊಬ್ಬರು ಹಂಚಿಕೊಂಡಿದ್ದಾರೆ. ರಕ್ತದ ಪ್ಯಾಕ್‌ನಲ್ಲಿ ಮೂಸಂಬಿ ರಸ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡೆಂಘೆಯಿಂದ ಬಳಲುತ್ತಿದ್ದ ಪ್ರದೀಪ್ ಪಾಂಡೆ ಎಂಬುವವರು ಅ.17ರಂದು ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. 2 ದಿನಕ್ಕೆ ಆಸ್ಪತ್ರೆಯಲ್ಲೇ ನಿಧನರಾದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಪ್ಲಾಸ್ಮಾ ಬದಲು ಮೂಸಂಬಿ ರಸ ನೀಡಲಾಗಿದೆ ಎಂದು ಆರೋಪಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಆಸ್ಪತ್ರೆಯನ್ನ ಸೀಜ್ ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿದ್ದ ಎಲ್ಲ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು ಜಿಲ್ಲಾಡಳಿತವು ತ್ರಿಸದಸ್ಯ ಸಮಿತಿಗೆ ಆದೇಶಿಸಿದೆ.
'ಆಸ್ಪತ್ರೆಯಲ್ಲಿ ಡೆಂಘೆ ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲಿಗೆ ಸಿಹಿನಿಂಬೆ ರಸ ಕೊಟ್ಟಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸಾಕ್ಷೀಕರಿಸುವಂತೆ ವಿಡಿಯೋ ಕೂಡ ವೈರಲ್ ಆಗಿದೆ. ಹಾಗಾಗಿ ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಅಲ್ಲಿ ಸಿಕ್ಕ ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪ ಸಾಬೀತಾದರೆ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನ ಬಿಡುವ ಪ್ರಶ್ನೆಯೇ ಇಲ್ಲ. ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ' ಎಂದು ಉಪ ಮುಖ್ಯಮಂತ್ರಿ ಪಾಠಕ್ ಟ್ವೀಟ್ ಮಾಡಿದ್ದಾರೆ.