

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಬೇಕೆಂದು ಪಣತೊಟ್ಟಿರುವ ಜೆಡಿಎಸ್ ಪಡೆ, ಚುರುಕಿನ ಸಿದ್ಧತೆ ನಡೆಸುತ್ತಿದೆ. ಜೆಡಿಎಸ್ ಮನೆಯಿಂದ ಹೊರ ಹೋಗಲು ಬಾಗಿಲಿಂದ ಆಚೆ ಕಾಲಿಟ್ಟಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರ ಮನಸ್ಸು ಕೂಡ ಈಗ ಬದಲಾಗಿದೆ. ದೇವೇಗೌಡರು ಇರೋವರೆಗೂ ಯಾವುದೇ ಕಾರಣಕ್ಕೂ ನಾನು ಮತ್ತು ನನ್ನ ಕುಟುಂಬಸ್ಥರು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ನಿನ್ನೆ(ಗುರುವಾರ) ಕಣ್ಣೀರಿಡುತ್ತಲೇ ಘೋಷಿಸಿದ್ದರು. ಇದರ ಬೆನ್ನಲ್ಲೇ(ಶುಕ್ರವಾರ) ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನ ಸ್ವತಃ ಜಿ.ಟಿ.ದೇವೇಗೌಡರೇ ಬಿಡುಗಡೆ ಮಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮೈಸೂರು ಭಾಗದ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಜಿ.ಟಿ.ದೇವೇಗೌಡ ಘೋಷಿಸಿದರು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡ, ಹುಣಸೂರಿಗೆ ಜಿ.ಟಿದೇವೇಗೌಡರ ಮಗ ಹರೀಶ್, ಕೆ.ಆರ್. ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ನರಸೀಪುರಕ್ಕೆ ಅಶ್ಚಿನ್, ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ಗೆ ಟಿಕೆಟ್ ಘೋಷಣೆಯಾಗಿದೆ.
ನಂತರ ಮಾತನಾಡಿದ ಜಿಡಿಟಿ, ನಾನು ನಿನ್ನೆಯಿಂದಲೇ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ಮತ್ತು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲವೂ ಉಳಿದಿಲ್ಲ. ಚಾಮುಂಡಿ ತಾಯಿಗೆ ಎಚ್.ಡಿ. ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ಓಡಾಡುವ ಶಕ್ತಿಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ. ಜನವರಿ ತಿಂಗಳಿನಲ್ಲಿ ಎಚ್.ಡಿ ದೇವೇಗೌಡರು ಚಂಡಿಕ ಹೋಮ ನಡೆಸಲಿದ್ದಾರೆ. ಎಚ್.ಡಿ ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೊಂಡಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನ ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದರು.