

ಉಳ್ಳಾಲ: ದೇಶಕ್ಕಾಗಿ ಅಪ್ರತಿಮ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ ಎಲ್ಲರೂ ತಮ್ಮ ಹೃದಯದಲ್ಲಿ ಸ್ವಾತಂತ್ರೃದ ಅರ್ಥ ಅಚ್ಚೊತ್ತಿಕೊಂಡಿರಬೇಕು. ನಾವು ಸ್ವಾತಂತ್ರೃ ಪಡೆದಾಗ ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ.13 ಮಾತ್ರ ಇತ್ತು. ಇಂದು ಶೇ.74ಕ್ಕೆ ತಲುಪಿದೆ. ಭವಿಷ್ಯದಲ್ಲಿ ನಮ್ಮ ದೇಶ ಸದಾ ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಭವ್ಯ ಭಾರತ ನಿರ್ಮಿಸೋಣ ಎಂದು ಮಂಗಳೂರು ಆಕಾಶವಾಣಿಯ ಮಾಜಿ ನಿರ್ದೇಶಕ ಡಾ.ವಸಂತ್ ಕುಮಾರ್ ಪೆರ್ಲ ಹೇಳಿದರು.
ತಲಪಾಡಿ ದೇವಿಪುರ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇರಳ ಹೈಕೋರ್ಟ್‌ನ ರಿಜಿಸ್ಟ್ರಾರ್ ದಿನೇಶ್ ಕೊಡಂಗೆ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿದ್ದು, ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು, ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಭಾರತ ವಂದನೆಯೆಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಭಾರತ ಮಾತೆಗೆ ಗೌರವ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳಿಗೆ ಗೋಪಿಚಂದನ ತಿಲಕ ಇಡಲಾಯಿತು. ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಸುಷ್ಮಾ ದಿನಕರ್ ಅಧ್ಯಕ್ಷತೆ ವಹಿಸಿದ್ದರು. ಡೇ ಬೋರ್ಡಿಂಗ್ ಪ್ರಾಂಶುಪಾಲ ಮೋಹನ್‌ದಾಸ್, ಪಪೂ ಕಾಲೇಜಿನ ಪ್ರಾಂಶುಪಾಲ ವಿನಾಯಕ ಬಿ.ಜಿ., ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾ ಪಣಿಕ್ಕರ್, ಆಡಳಿತ ವ್ಯವಸ್ಥಾಪಕ ಪ್ರಫುಲ್, ಪ್ರವೇಶಾಂಗ ವ್ಯವಸ್ಥಾಪಕ ವಿವೇಕ್ ತಂತ್ರಿ ಉಪಸ್ಥಿತರಿದ್ದರು.
ಡೇ ಬೋರ್ಡಿಂಗ್ ಉಪಪ್ರಾಂಶುಪಾಲೆ ರಜನಿ ಸ್ವಾಗತಿಸಿ. ಶಿಕ್ಷಕಿ ಕವಿತಾ ವಂದಿಸಿ, ಶಿಕ್ಷಕಿ ಶರಣ್ಯಾ ಮತ್ತು ಶ್ರೇಯಾ ರಾಜ್ ನಿರ್ವಹಿಸಿದರು.