

ಕೊಕ್ಕರ್ಣೆ: ಮಳೆಗಾಲ ಶುರುವಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಕಲ್ಲಣಬೆಗಳು ಕಾಣಸಿಗುತ್ತವೆ. 15 ರಿಂದ 20 ದಿನಗಳ ಕಾಲ ಸುರಿಯುವ ಗುಡುಗು ಸಹಿತ ಮಳೆಗೆ ಹಳ್ಳಿ ಪ್ರದೇಶಗಳಲ್ಲಿ ಭೂಮಿ ತಂಪಾಗಿ ನೆಲದ ಒಳಗಿಂದ ಅಣಬೆಗಳು ಮೇಲೇಳುತ್ತವೆ. ಕಲ್ಲಣಬೆಗೆ ಹೆಚ್ಚು ಬೇಡಿಕೆಯಿದ್ದು, ಇದರಿಂದ ತಯಾರಿಸುವ ಖಾದ್ಯವೂ ವಿಶಿಷ್ಟ ರುಚಿಯಿಂದ ಕೂಡಿರುತ್ತದೆ.
ಕಲ್ಲುಅಣಬೆ, ಬೋಗಿಅಣಬೆ, ಹುಲ್ಲುಅಣಬೆ, ಎಣ್ಣೆಅಣಬೆ, ಹೊಯಿಗೆಅಣಬೆ, ತುಪ್ಪಅಣಬೆ, ಹುತ್ತದ ಮೇಲೆ ಬೆಳೆಯುವ ಹೆಗ್ಗೆಲೆಅಣಬೆ ಹೀಗೆ ಹಲವಾರು ವಿಧದ ಅಣಬೆಗಳು ದೊರೆಯುತ್ತವೆ. ಇದರಲ್ಲಿ ಕೆಲವೊಂದು ಅಣಬೆಗಳು ತಿನ್ನಲು ಯೋಗ್ಯವಲ್ಲ. ಆದರೆ ಇದರಲ್ಲಿ ಹೆಚ್ಚು ಉಪಯೋಗಿಸುವುದು ಕಲ್ಲು ಅಣಬೆ. ಇದು ಹೊಯಿಗೆ ಮಿಶ್ರಿತ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಕೊಕ್ಕರ್ಣೆ ಸುತ್ತಮುತ್ತ ಕಲ್ಲಣಬೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ. ಆದರೆ ಈ ಬಾರಿ ಕೊಕ್ಕರ್ಣೆ, ಮಂದಾರ್ತಿ, ನಂಚಾರು, ಕೆಂಜೂರು ಮುಂತಾದ ಗ್ರಾಮೀಣ ಭಾಗಗಳಲ್ಲಿ ಅಣಬೆಗಳು ಕಡಿಮೆಯಾಗಿವೆ. ವಾರುಕಟ್ಟೆಯಲ್ಲಿ ಕೆಜಿಗೆ 600 ರೂ.ವರೆಗೆ ದರವಿದೆ. ಇದು ಬೆಂಗಳೂರು, ಮಂಗಳೂರು, ಮುಂಬೈ ಹಾಗೂ ದೇಶ ವಿದೇಶಕ್ಕೂ ಸಾಗಾಟವಾಗುತ್ತದೆ. ಈ ಬಾರಿ ಕಲ್ಲಣಬೆಗೆ ಬೇಡಿಕೆ ಸಾಕಷ್ಟಿದ್ದರೂ ಪೂರೈಕೆ ಇಲ್ಲ. ಹವಾಮಾನ ವೈಪರಿತ್ಯದಿಂದ ಅಣಬೆಗಳು ಹೆಚ್ಚಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಅಣಬೆ ವ್ಯಾಪಾರಿ ಗುರುಪ್ರಸಾದ್ ಕಿಣಿ ದೊಂಡೇರಂಗಡಿ.