ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಾರ್ಕಳ ತಾಲೂಕಿನ ಕುಕ್ಕುಜೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ. ರಾಷ್ಟ್ರಮಟ್ಟದ ಮಾದರಿ ತಯಾರಿಕೆ (ಮಾಡೆಲ್ ಮೇಕಿಂಗ್) ಸ್ಪರ್ಧೆಯಲ್ಲಿ ವಿಜೇತರಾಗಿರುವ ಅಮೂಲ್ಯಾ ಹಾಗೂ ನಿಕಿತಾ ಜಪಾನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯ ನಡೆಸುವ ಇನ್‌ಸ್ಪಾಯರ್ ಅವಾರ್ಡ್ ಸ್ಪರ್ಧೆಯ ರಾಷ್ಟ್ರಮಟ್ಟದ ವಿಭಾಗದಲ್ಲಿ ವಿಜೇತರಾಗಿ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ. 54 ವಿದ್ಯಾರ್ಥಿಗಳ ತಂಡದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಜಪಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ ‘ಫ್ಲಡ್ ಡಿಟೆಕ್ಟರ್ ಪೋಲ್’ ಹಾಗೂ ‘ರೋಪೋ ಮೀಟರ್’ ಎಂಬ ಅನ್ವೇಷಣೆಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. ಈ ಮೂಲಕ ಇನ್‌ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಒಂದೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡ ದೇಶದ ಮೊದಲ ಶಾಲೆ ಎಂಬ ಕೀರ್ತಿಗೆ ಕುಕ್ಕುಜೆ ಪ್ರೌಢಶಾಲೆ ಪಾತ್ರವಾಗಿದೆ.
15ರಿಂದ ಸಮ್ಮೇಳನ
ಜೂನ್ 15ರಿಂದ 21ರ ವರೆಗೆ ಒಂದು ವಾರ ಕಾಲ ಜಪಾನ್‌ನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನ ನಡೆಯಲಿದ್ದು, ದೇಶದ ಒಟ್ಟು 54 ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದ ಕುಕ್ಕುಜೆಯ ಸರ್ಕಾರಿ ಪ್ರೌಢಶಾಲಾ ವಿಭಾಗದ ಅಮೂಲ್ಯ ಹಾಗೂ ನಿಕಿತಾ ಈ ಅವಕಾಶ ಪಡೆದಿದ್ದು ಇಡೀ ಊರಿಗೆ ಹರ್ಷವಾಗಿದೆ.
ಜಿಲ್ಲಾಧಿಕಾರಿಗಳಿಂದ ಗೌರವ
ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರ ಸಾಧನೆಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುವಾರಿ ಬುಧವಾರ ತಮ್ಮ ಕಚೇರಿಯಲ್ಲಿ ಗೌರವಿಸಿ ಅಭಿನಂದಿಸಿದರು.
ಫ್ಲಡ್ ಡಿಟೆಕ್ಟರ್ ಪೋಲ್
ಅಮೂಲ್ಯಾ ಹೆಗ್ಡೆ ತಯಾರಿಸಿರುವ ‘ಫ್ಲಡ್ ಡಿಟೆಕ್ಟರ್ ಪೋಲ್’ ಹೆಸರಿನ ಜೀವ ರಕ್ಷಕ ಯಂತ್ರ ನೆರೆ, ಪ್ರವಾಹಗಳಂತ ನೈಸರ್ಗಿಕ ವಿಕೋಪದ ಕಾಲದಲ್ಲಿ ಊರಿಗೆ ಊರೇ ಜಾಗೃತಗೊಳ್ಳುವಂತೆ ಎಚ್ಚರಿಕೆ ನೀಡುವ ಮೂಲಕ ಪ್ರಾಣ ಹಾನಿ ಆಗದಂತೆ ತಡೆಯುತ್ತದೆ.
ರೋಪೋ ಮೀಟರ್
ನಿಕಿತಾ ತಯಾರಿಸಿರುವ ‘ರೋಪೋ ಮೀಟರ್’ ಹಗ್ಗ, ತಂತಿ, ವಯರ್ ಮೊದಲಾದ ತೆಳ್ಳಗಿನ ಉದ್ದನೆಯ ವಸ್ತುಗಳನ್ನು ಅಳೆಯುವುದಕ್ಕೆ ಉಪಯೋಗವಾಗಲಿದೆ. ಒಂದು ಇಂಚು ಕೂಡ ಹೆಚ್ಚು ಕಡಿಮೆಯಾಗದಂತೆ ಬಹಳ ಸಲೀಸಾಗಿ ಅಳೆಯುವ ಯಂತ್ರವಾಗಿದೆ.
ಏನಿದು ಇನ್‌ಸ್ಪಾಯರ್ ಅವಾರ್ಡ್?
ಶಾಲಾ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆ, ಸಂಶೋಧನಾ ಮನೋಭಾವ, ನಾವೀನ್ಯ ಚಿಂತನೆಗಳನ್ನು ಸವಾಜಕ್ಕೆ ಉಪಯುಕ್ತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರತಿ ವರ್ಷ ದೇಶಾದ್ಯಂತ ನಡೆಸುವ ರಾಷ್ಟ್ರಮಟ್ಟದ ವಾದರಿ ತಯಾರಿಕೆ (ಮಾಡೆಲ್ ಮೇಕಿಂಗ್) ಸ್ಪರ್ಧೆ ಇದಾಗಿದೆ.
ಒಂದೇ ತರಗತಿಯ ಇಬ್ಬರು ಹೆಣ್ಣು ಮಕ್ಕಳು ಜಪಾನ್‌ನ ಅಂತಾರಾಷ್ಟ್ರೀಯ ವೇದಿಕೆಗೆ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. ಲಿಂಗ ಸವಾನತೆ ಸಾಕಾರಗೊಳಿಸುವಲ್ಲಿ ದೇಶದ ನಾರಿ ಶಕ್ತಿಗೆ ದೊರಕಿರುವ ಅತ್ಯದ್ಭುತ ಪ್ರೇರಣೆಯಾಗಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಸುರೇಶ್ ಮರಕಾಲ, ಮಾರ್ಗದರ್ಶನ ನೀಡಿದ ಶಿಕ್ಷಕ