ಬೈಂದೂರು ಕ್ಷೇತ್ರದ ಬಸ್ ಸಂಖ್ಯೆ ಹೆಚ್ಚಳ: ಶಾಸಕರ ಮನವಿಗೆ ಸಾರಿಗೆ ಸಚಿವ ಸ್ಪಂದನೆ

ksrtc buses
ಕೆಎಸ್‌ಆರ್‌ಟಿಸಿ ಬಸ್
Published on

ಗಂಗೊಳ್ಳಿ: ಶಕ್ತಿ ಯೋಜನೆ ಜಾರಿಯಾದ ನಂತರ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಬೇಡಿಕೆಗಳು ಬರುತ್ತಿದ್ದು, ಇದರನ್ವಯ ಮೊದಲ ಆದ್ಯತೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ವಿಧಾನ ಸಭೆ ಕಲಾಪದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೈಂದೂರು ವಿಧಾನಸಭಾ ವ್ಯಾಪ್ತಿಯ ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 25 ಸಾಮಾನ್ಯ ಸಾರಿಗೆಗಳಿಂದ 157 ಸುತ್ತುವಳಿಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಯಂತೆ ಕುಂದಾಪುರ-ಬೋಳಂಬಳ್ಳಿ, ಕುಂದಾಪುರ-ಸಿದ್ಧಾಪುರ, ಕುಂದಾಪುರ-ಬಡಾಕೆರೆ, ಕುಂದಾಪುರ-ಭಟ್ಕಳ, ಕುಂದಾಪುರ-ಅಜ್ರಿ, ಕುಂದಾಪುರ-ತೊಂಬಟ್ಟು ಮಾರ್ಗಗಳಿಗೆ ಸುತ್ತುವಳಿ/ಸಮಯ ಪರಿಷ್ಕರಿಸಿ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಾರಿಗೆಯನ್ನು ಆದಾಯ ಕಡಿಮೆ ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಬೇಡಿಕೆ ಹೆಚ್ಚುತ್ತಿರುವುದರಿಂದ ಮರು ಆರಂಭಿಸಲಾಗುತ್ತಿದೆ. ನಿಗಮದಲ್ಲಿ ಹೊಸ ವಾಹನಗಳ ಸೇರ್ಪಡೆ, ಚಾಲನ ಸಿಬ್ಬಂದಿಯ ನೇರ ನೇಮಕಾತಿ ಪ್ರಗತಿಯಲ್ಲಿದ್ದು, ವಾಹನ ಮತ್ತು ಸಿಬ್ಬಂದಿ ನಿಗಮಕ್ಕೆ ಸೇರ್ಪಡೆಯಾದ ನಂತರ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲು ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net