ಕೃಷಿಕರನ್ನು ಕಾಡುತ್ತಿವೆ ಕಾಡುಪ್ರಾಣಿಗಳು : ಕಾಡಾನೆ, ಕಾಡುಕೋಣಗಳ ದಾಳಿಯಿಂದ ಅಪಾರ ಬೆಳೆ ಹಾನಿ ನಷ್ಟದಿಂದ ಕಂಗೆಟ್ಟ ರೈತ

New Project (19)
Published on

ಶಶಿ ಕುತ್ಯಾಳ ಈಶ್ವರಮಂಗಲ ಅಡಕೆ ಕೃಷಿಗೆ ರೋಗಗಳ ಕಾಟದ ಜತೆಗೆ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ಗ್ರಾಮೀಣ ಭಾಗದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡುಪ್ರಾಣಿಗಳು ಈ ರೀತಿ ಹಾವಳಿಯಿಟ್ಟರೆ ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಕೃಷಿಕರು. ಪುತ್ತೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಡಕೆ ಕೃಷಿಯನ್ನೇ ಜನ ಜೀವನಾಧಾರವಾಗಿ ಅವಲಂಬಿಸಿಕೊಂಡಿದ್ದು, ಅಡಕೆ ಕೃಷಿಯ ಜತೆಗೆ ತೆಂಗು, ಕೊಕ್ಕೋ, ಬಾಳೆ, ಕರಿಮೆಣಸು ಇತ್ಯಾದಿ ಪರ್ಯಾಯ ಬೆಳೆಗಳನ್ನು ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇಂದಿಗೂ ಕೆಲವರು ಭತ್ತ ಬೇಸಾಯ ಮಾಡಿಕೊಂಡಿದ್ದಾರೆ. ವಿಪರೀತವಾಗಿರುವ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಕೃಷಿಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಕಾಡಾನೆ-ಕಾಡುಕೋಣ ಕಾಟ : ಕೆಲವು ತಿಂಗಳಿಂದ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ನೂಜಿಬೈಲು, ಮಾಡ್ನೂರು ಗ್ರಾಮದ ಅಮ್ಚಿನಡ್ಕ ವ್ಯಾಪ್ತಿ ಹಾಗೂ ಕೊಳ್ತಿಗೆ ಭಾಗಕ್ಕೆ ಪದೇಪದೆ ಕಾಡಾನೆಗಳು ಲಗ್ಗೆಯಿಟ್ಟು ತೆಂಗು ಮತ್ತು ಅಡಕೆ ಗಿಡಗಳನ್ನು, ಬಾಳೆ ಕೃಷಿಯನ್ನು ನಾಶ ಮಾಡುತ್ತಿವೆ. ಈ ಭಾಗದ ಕೃಷಿಕರು ಕಾಡಾನೆಗಳ ದಾಳಿಯಿಂದಾಗಿ ಕೃಷಿ ಕಳಕೊಂಡು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ,ಕರ್ನೂರು-ಕೊಪ್ಪಳ, ಪಡುವನ್ನೂರು ಗ್ರಾಮದ ಕನ್ನಡ್ಕ, ಪದಡ್ಕ, ಸಜಂಕಾಡಿ, ಪೈರುಪುಣಿ, ಅರಿಯಡ್ಕ-ಬಡಗನ್ನೂರು ಗ್ರಾಮಗಳ ಗಡಿಪ್ರದೇಶ ವ್ಯಾಪ್ತಿಯ ಬಳ್ಳಿಕಾನ, ಬಪ್ಪಪುಂಡೇಲು, ಕೆಯ್ಯೂರು ಗ್ರಾಮ ವ್ಯಾಪ್ತಿಯ ಕಣಿಯಾರು, ಕೊಳ್ತಿಗೆ ಮತ್ತು ಪಾಣಾಜೆ ಗ್ರಾಮ ವ್ಯಾಪ್ತಿಗಳಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಹಿಂಡು ಹಿಂಡಾಗಿ ಕಾಡಿನಿಂದ ರಾತ್ರಿ ವೇಳೆ ನಾಡಿಗಿಳಿಯುವ ಕಾಡುಕೋಣಗಳು ಕೃಷಿ ನಾಶ ಮಾಡುತ್ತಿದ್ದು, ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎನ್ನುವುದು ಕೃಷಿಕರ ದೂರು. ಹಗಲು ಮಂಗ, ಅಳಿಲು ಉಪಟಳ: ಗ್ರಾಮೀಣ ವ್ಯಾಪ್ತಿಯಲ್ಲಿ ಮಂಗಗಳು ತುಂಬಿಕೊಂಡಿದ್ದು, ತೆಂಗಿನಮರದಲ್ಲಿ ಒಂದೇ ಒಂದು ಸೀಯಾಳ ಉಳಿಸುತ್ತಿಲ್ಲ. ಒಂದೊಂದು ಹಿಂಡಿನಲ್ಲಿ 200-300ಕ್ಕಿಂತಲೂ ಅಧಿಕ ಮಂಗಳಗಳಿದ್ದು, ಪ್ರತಿವರ್ಷ ಮಂಗಗಳ ಸಂತಾನ ಇಮ್ಮಡಿಯಾಗುತ್ತಿದೆ. ಪ್ರತಿದಿನ ಮಂಗಗಳನ್ನು ಓಡಿಸುವುದೇ ನಮಗೆ ಕೆಲಸವಾಗಿದೆ. ಈ ಹಿಂದೆ ಗರ್ನಾಲ್ ಸಿಡಿಸಿ, ಕೋವಿಗಳನ್ನು ಬಳಸಿ ಮಂಗಗಳನ್ನು ಓಡಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಅದಕ್ಕೂ ಕ್ಯಾರೇ ಮಾಡುತ್ತಿಲ್ಲ. ಮಂಗಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕೃಷಿಕರು. ಮಂಗಗಳು ಬಾಳೆಗೊನೆಯನ್ನೂ ಬಿಡುತ್ತಿಲ್ಲ. ಕೊಕ್ಕೊ ಹಣ್ಣನ್ನು ನಾಶ ಮಾಡುತ್ತಿವೆ. ತರಕಾರಿ ಕೃಷಿಗೂ ಹಾನಿ ಮಾಡುತ್ತಿವೆ. ಅಡಕೆ ತೋಟಕ್ಕೆ ಲಗ್ಗೆ ಇಟ್ಟರೆ ಹಣ್ಣಡಕೆಯ ಸಿಪ್ಪೆ ಸುಲಿದು ತಿನ್ನುತ್ತಿದ್ದ ಮಂಗಗಳು, ಹಿಂಗಾರವನ್ನು ಕಿತ್ತು ಪುಡಿಗೈದು ಕಪಿಚೇಷ್ಟೆ ಮಾಡುತ್ತವೆ. ಅಳಿಲುಗಳ ಹಾವಳಿಯೂ ಎಲ್ಲೆಡೆ ವಿಪರೀತವಾಗಿದೆ. ಭತ್ತದ ಕೃಷಿ ಮತ್ತು ತರಕಾರಿ ಕೃಷಿ ಹಾನಿ ಮಾಡುವ ನವಿಲುಗಳ ಹಾವಳಿಯೂ ಜಾಸ್ತಿಯಾಗಿದೆ. ಹೀಗಾದರೆ ಏನು ಎನ್ನುವುದು ಕೃಷಿಕರ ಹತಾಶೆಯ ಪ್ರಶ್ನೆ. ರಾತ್ರಿ ಹಂದಿ ಕಾಟ: ಪೊದೆ-ಬಳ್ಳಿಗಳಿಂದ ಆವೃತ್ತಗೊಂಡಿರುವ ಗುಡ್ಡ ಪ್ರದೇಶದಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಬೀಡುಬಿಡುವ ಕಾಡುಹಂದಿಗಳು ರಾತ್ರಿಯ ವೇಳೆ ನಾಡಿಗಿಳಿದು ಕೃಷಿ ತೋಟಗಳಿಗೆ ಬಂದು ಕೃಷಿ ಹಾನಿ ಮಾಡುತ್ತಿವೆ. ಎಳೆಯ ತೆಂಗಿನಗಿಡ, ಅಡಕೆ ಗಿಡಗಳನ್ನು ತಿನ್ನುತ್ತಿವೆ. ಅಡಕೆ ಮತ್ತು ತೆಂಗಿನಮರದ ಬುಡಗಳಿಗೆ ಹಾಕಿದ ಹಟ್ಟಿಗೊಬ್ಬರ, ಕುರಿಗೊಬ್ಬರ, ಆಡು ಗೊಬ್ಬರ, ಹರಳಿಂಡಿ ಗೊಬ್ಬರವನ್ನು ಸಂಪೂರ್ಣವಾಗಿ ‘ಅಗತೆ ಮಾಡಿದ ರೀತಿಯಲ್ಲಿ’ ಚೆಲ್ಲಾಪಿಲ್ಲಿಗೈದು ಉಪಯೋಗಕ್ಕೆ ಬಾರದಂತೆ ಮಾಡುತ್ತಿವೆ. ಕೊಯ್ಲಿಗೆ ಬರುವ ಸಂದರ್ಭದಲ್ಲಿ ಭತ್ತದ ಕೃಷಿಯನ್ನು ತಿಂದು ತೇಗಿ, ಪುಡಿಗೈದು ನಾಶ ಮಾಡುತ್ತಿವೆ. ನಿಗ್ರಹಕ್ಕೆ ಆಗ್ರಹ ಆನೆ, ಕಾಡುಕೋಣ ಮೊದಲಾದ ಕಾಡುಪ್ರಾಣಿಗಳಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ನಾಶವಾದರೆ ಅರಣ್ಯ ಇಲಾಖೆ ಪರಿಹಾರ ನೀಡುಗುತ್ತಿದೆ. ಆದರೆ ಮಂಗ, ಳಿಲುಗಳಿಂದ ಆಗುತ್ತಿರುವ ಕೃಷಿ ನಾಶಕ್ಕೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಇದರ ಹಾವಳಿಯನ್ನು ತಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿಯಿಂದಾಗಿ ಕಷ್ಟಪಟ್ಟು ದುಡಿಯುವ ಕೃಷಿಕರ ಶ್ರಮವ್ಯರ್ಥವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಕೃಷಿಕರ ಆಗ್ರಹ.

ಕಾಡುಪ್ರಾಣಿಗಳ ಹಾವಳಿ ಎಲ್ಲಡೆ ವಿಪರೀತವಾಗಿದೆ. ಆನೆ, ಕಾಡುಕೋಣ, ಹಂದಿ, ಮುಳ್ಳುಹಂದಿ, ಮಂಗ, ಅಳಿಲುಗಳ ಉಪಟಳದಿಂದಾಗಿ ಕೃಷಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಸರ್ಕಾರದ ನೀತಿಯಿಂದಾಗಿ ಕೋವಿ ಇದ್ದರೂ ಪ್ರಾಣಿಗಳನ್ನು ಕೊಲ್ಲುವ ಅವಕಾಶ ಇಲ. ಸರ್ಕಾರ ಕಾಡುಪ್ರಾಣಿಗಳ ಹಾವಳಿ ತಡೆಗೆ ಸೂಕ್ತಕ್ರಮ ಕೈಗೊಳ್ಳಬೇಕು. ಹೀಗೆಯೇ ಕಾಡುಪ್ರಾಣಿಗಳ ಹಾವಳಿ ಮುಂದುವರಿದರೆ ಮುಂದೊಂದು ದಿನ ಕೃಷಿಕರು ದಂಗೆಯೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಕುಮಾರ್ ಪೆರ್ನಾಜೆ ಪ್ರಗತಿಪರ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net