

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಹಿಂದೆ ಅಕ್ರಮ-ಸಕ್ರಮ ಕಡತ ಪರಿಶೀಲನೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿತ್ತು. ಆದರೆ ಈಗ ಬೈಠಕ್ ಅನ್ನು ಜನತೆಯ ಮುಂದೆ ನಡೆಯುವಂತೆ ಮಾಡಿದ್ದೇನೆ. ಅಕ್ರಮ-ಸಕ್ರಮ ಕಡತಗಳ ಪರಿಶೀಲನೆ ಹಾಗೂ ಹಕ್ಕುಪತ್ರ ನೀಡುವ ಕೆಲಸವನ್ನು ಗ್ರಾಮಮಟ್ಟಕ್ಕೆ ತಂದು ನಿಲ್ಲಿಸಿದ್ದು, ಈಗ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕೋಡಿಂಬಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ, ಅಕ್ರಮ-ಸಕ್ರಮ ಬೈಠಕ್ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಮುಂದೆ ವಾರದಲ್ಲಿ ಒಂದು ದಿನ ಕಂದಾಯ ಇಲಾಖೆಯ ಕಡತ ಪರಿಶೀಲನೆ ನಡೆಸಲಾಗುವುದು. ಜನರು ತಮ್ಮ ಜಾಗದ ಹಕ್ಕಿಗಾಗಿ ಕಚೇರಿ ಅಲೆದಾಟ ಮಾಡುವುದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಅಕ್ರಮ-ಸಕ್ರಮ ಬೈಠಕ್ ನಡೆಯುವಲ್ಲಿ ಶಾಸಕರ ಮುತುವರ್ಜಿ ಗಮನಾರ್ಹ. ಕಡತ ವಿಲೇವಾರಿ ವಿಚಾರದಲ್ಲಿ ವಿಳಂಬವಾಗದಂತೆ ಪದೇಪದೆ ಒತ್ತಡ ಹೇರುತ್ತಿದ್ದಾರೆ. ಈ ಕಾರಣದಿಂದ ರಾಜ್ಯದಲ್ಲಿ ಪುತ್ತೂರು ತಾಲೂಕು ಕಡತ ವಿಲೇವಾರಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಎಲ್ಲೂ ಅಗದ ಕೆಲಸ ಪುತ್ತೂರಲ್ಲಿ ನಡೆದಿದೆ ಎಂದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಮಾತನಾಡಿದರು. ಸಮಿತಿ ಸದಸ್ಯರಾದ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕೋಡಿಂಬಾಡಿ, ಬಜತ್ತೂರು, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಬೆಳ್ಳಿಪ್ಪಾಡಿ, ಹಿರೇಬಂಡಾಡಿ, ಕೊಡಿಪ್ಪಾಡಿ ಹಾಗೂ ಕಬಕ ವ್ಯಾಪ್ತಿಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ 30 ಫಲಾನುಭವಿಗಳಿಗೆ ಅಕ್ರಮ-ಸಕ್ರಮ ಹಾಗೂ 30 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರಗಳನ್ನು ಶಾಸಕ ಅಶೋಕ್ ರೈ ವಿತರಣೆ ಮಾಡಿದರು.
ಗ್ರಾಮ ಆಡಳಿತಾಧಿಕಾರಿಗಳು ವಾರದಲ್ಲೊಂದು ದಿನ ನಿಗದಿಮಾಡಿ ಗ್ರಾಮದ ಸಾರ್ವಜನಿಕರಿಗೆ ಲಭ್ಯವಿರುವಂತೆ ಕಚೇರಿಯಲ್ಲಿ ಇರಬೇಕು. ಕೆಲಸ, ಮೀಟಿಂಗ್ ಎಂದು ವಾರದ ಏಳು ದಿನವೂ ಹೊರಗಡೆ ಇದ್ದರೆ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಕಚೇರಿಯಲ್ಲಿ ಇಂಥದ್ದೇ ದಿನ ಕಡ್ಡಾಯ ಇರುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸಬೇಕು. ಕಚೇರಿಯಲ್ಲಿ ಇರುವಿಕೆ ಪರಿಶೀಲನೆ ನಡೆಸುತ್ತೇನೆ. ಕಡತ ವಿಲೇವಾರಿಗೆ ತಡ ಮಾಡಿದರೆ ಗ್ರಾಮಾಡಳಿತಾಧಿಕಾರಿಗಳ ಕಚೇರಿಗೆ ನಾನೇ ಬರಬೇಕಾಗುತ್ತದೆ ಎಂದು ಶಾಸಕ ಅಶೋಕ್ ರೈ ಎಚ್ಚರಿಸಿದರು.
ಬಡವರು ತಮ್ಮ ಮನೆಯಡಿ ಸ್ಥಳ ಸೇರಿದಂತೆ 10 ಸೆಂಟ್ಸ್ ಅಥವಾ 50 ಸೆಂಟ್ಸ್‌ಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ, ಯಾವುದೇ ಕಾರಣಕ್ಕೂ ಅಂತಹ ಫಲಾನುಭವಿಗಳ ಅರ್ಜಿ ರಿಜೆಕ್ಟ್ ಮಾಡಬೇಡಿ. ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ತಾಂತ್ರಿಕ ಸಮಸ್ಯೆಯಾಗಲಿ ಅಥವಾ ಇನ್ನಾವುದೇ ಸಮಸ್ಯೆಯಾಗಲಿ, ಕಡತಗಳನ್ನು ಇತ್ಯರ್ಥಪಡಿಸಲು ನಾನು ಯಾವ ಹಂತದವರೆಗೂ ಹೋಗಲೂ ಸಿದ್ಧ. ಅಧಿಕಾರಿಗಳು ಸಬೂಬು ಹೇಳಿ ಬಡವರ ಅರ್ಜಿಗಳನ್ನು ವಿಲೇ ಮಾಡದೆ ಕಪಾಟಿನಲ್ಲಿಡುವುದು ಬೇಡ ಎಂದು ಶಾಸಕ ಅಶೋಕ್ ರೈ ಎಚ್ಚರಿಸಿದರು.
ಕ್ಷೇತ್ರ ವ್ಯಾಪ್ತಿಯ ಸಾವಿರಾರು ಕಡತಗಳು ತಾಲೂಕು ಕಚೇರಿಯಲ್ಲಿ ಧೂಳು ಹಿಡಿದಿವೆ. ಹತ್ತು ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗಳೂ ಯಾವ ಕಾರಣಕ್ಕಾಗಿ ಬಾಕಿಯಾಗಿದೆ ಎಂದು ನನಗೂ, ಅರ್ಜಿ ಹಾಕಿದವರಿಗೂ ಗೊತ್ತಿದೆ. ಭ್ರಷ್ಟಾಚಾರದ ಕಾರಣಕ್ಕೆ ಕಡತಗಳು ಕೋಮಾ ಸ್ಥಿತಿಗೆ ತಲುಪಿದ್ದವು. ಅಂತಹ ಕಡತಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತಿದ್ದೇನೆ ಎಂದರು.