

ಮಂಗಳೂರು: ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದ್ದು, ಮಹಾನಗರ ಪಾಲಿಕೆ ವತಿಯಿಂದ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾನವ ಸರಪಳಿ ರಚಿಸಿ, ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ಉತ್ತರದ ಪಾವಂಜೆ ನದಿಯಿಂದ ರಾಷ್ಟ್ರೀಯ ಹೆದ್ದಾರಿಯುದ್ಧಕ್ಕೂ ಸಾಗಿ, ನಂತೂರು ಜಂಕ್ಷನ್, ಪಡೀಲ್ ಜಂಕ್ಷನ್‌ನಿಂದ ಸಾಗಿ ಕಣ್ಣೂರು ಜಂಕ್ಷನ್ ವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು ಎಂದರು.
ಬೆಳಗ್ಗೆ 9.30ಕ್ಕೆ ನಗರದ ಸರ್ಕೀಟ್ ಹೌಸ್ ಬಳಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಇದರಲ್ಲಿ ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸುವರು. 9.45ಕ್ಕೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. 10 ಗಂಟೆಗೆ ಸಂವಿಧಾನ ಪೀಠಿಕೆ ಬೋಧನೆ ಹಾಗೂ ಮಾನವ ಸರಪಳಿ ರೂಪಿಸಲಾಗುವುದು. 10.15ಕ್ಕೆ ಸಸಿ ನೆಡುವ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗ್ರೆ ಬಳಿ ನದಿ ಕಿನಾರೆಯಲ್ಲಿ ಒಂದು ಸಾವಿರ ಗಿಡ ನೆಡಲು ಇಲ್ಲಿ ಚಾಲನೆ ನೀಡಲಾಗುವುದು ಎಂದರು.
ಸುರತ್ಕಲ್ ಹಾಗೂ ಕಣ್ಣೂರುಗಳಲ್ಲಿ ಪಾಲಿಕೆಯಿಂದ ಕೇಸರಿ, ಬಿಳಿ, ಹಸಿರಿನ ಬೃಹತ್ ಬಟ್ಟೆಯನ್ನು ಕಟ್ಟಿ ಅಲಂಕರಿಸಲಾಗುವುದು. ಮಾರ್ಗ ಮಧ್ಯೆ ಕೆಪಿಟಿ, ನಂತೂರು, ಪಡೀಲ್ ಜಂಕ್ಷನ್ ಹಾಗೂ ಸುರತ್ಕಲ್ ವಲಯ ಕಚೇರಿಯನ್ನು ಅಲಂಕರಿಸಲಾಗುವುದು. ಮಾನವ ಸರಪಳಿ ಸಾಗುವ ಮಾರ್ಗದುದ್ದಕ್ಕೂ ಪ್ರತಿ ನೂರು ಮೀಟರ್ ಅಂತರದಲ್ಲಿ ದೇಶದ ಬಾವುಟ, ಬಾವುಟ ರಚನೆ ಪ್ರದರ್ಶಿಸಲಾಗುವುದು. ಪ್ರಜಾಪ್ರಭುತ್ವದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಎನ್‌ಜಿಒ, ಶಾಲಾ ಕಾಲೇಜುಗಳನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ. ಒಟ್ಟು 23 ಕಿ.ಮೀ. ದೂರದ ಮಾನವ ಸರಪಳಿ ಇರಲಿದ್ದು, ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಯಾ ಶಾಸಕ ಕ್ಷೇತ್ರಗಳಲ್ಲೂ ಇದೇ ರೀತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾನವ ಸರಪಳಿಯಲ್ಲಿ ಭಾಗವಹಿಸಿದ ಫೋಟೋಗಳನ್ನು ಈ ವೆಬ್‌ಸೈಟ್(ಠಿಠಿ://ಛಿಞಟ್ಚ್ಟಚ್ಚಚ್ಟ್ಞಠಿ.ಜ್ಞಿ/) ಗೆ ಅಪ್‌ಲೋಡ್ ಮಾಡಿ ಫೋಟೋ ಜೊತೆ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆಯಲು ಅವಕಾಶ ಇದೆ ಎಂದರು.
ಉಪ ಮೇಯರ್ ಸುನಿತಾ, ಇದ್ದರು.