ದೇಶ ನಿರ್ಮಾಣದ ಶಿಕ್ಷಣ ಅವಶ್ಯ ರಾಮಕೃಷ್ಣ ಮಠದಲ್ಲಿ ‘ಪ್ರಜ್ಞಾ’ ವಿಚಾರ ಸಂಕಿರಣ ಉದ್ಘಾಟಿಸಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅಭಿಮತ

mng-sep11-ramakrishna matt
Published on


ಮಂಗಳೂರು: ದೇಶದಲ್ಲಿ ಶೇ.50ಕ್ಕಿಂತ ಅಧಿಕ ಯುವ ಸಮುದಾಯವಿದೆ. ಆದರೆ ಯುವ ಶಕ್ತಿ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ವ್ಯಕ್ತಿತ್ವದ ಜತೆಗೆ ದೇಶ ನಿರ್ಮಾಣದ ಶಿಕ್ಷಣದ ಅವಶ್ಯಕತೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.


ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ರಾಮಕೃಷ್ಣ ಮಠದಲ್ಲಿ ‘ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ’ ವಿಷಯದ ಮೇಲೆ ಬುಧವಾರ ಹಮ್ಮಿಕೊಂಡ ವಿಚಾರ ಸಂಕಿರಣ ‘ಪ್ರಜ್ಞಾ’ ಉದ್ಘಾಟಿಸಿ, ಅವರು ಮಾತನಾಡಿದರು.


ಸ್ವಾಮಿ ವಿವೇಕಾನಂದರ ಆಶಯದಂತೆ ನಿಜವಾದ ಶಿಕ್ಷಣವೆಂದರೆ ಅದು ಒಬ್ಬ ವ್ಯಕ್ತಿಯನ್ನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಬೇಕು. ಜೀವನ ನಿರ್ಮಾಣಕ್ಕೆ, ಮನುಷ್ಯ ನಿರ್ಮಾಣಕ್ಕೆ, ಶೀಲ ನಿರ್ಮಾಣಕ್ಕೆ ಸಹಾಯಕವಾಗುವ ಭಾವನೆಗಳನ್ನು ರಕ್ತಗತಮಾಡಿಕೊಡಬಲ್ಲ ಶಿಕ್ಷಣ ನಮಗೆ ಬೇಕು ಎಂದರು.


ಶಿಕ್ಷಣದ ಮೂಲಕ ಬೌದ್ಧಿಕ ಮತ್ತು ಮಾನಸಿಕವಾಗಿ ಸಮರ್ಥರಾದ ಬಳಿಕ ನಿಸ್ವಾರ್ಥ ಸೇವೆ ಸಮಾಜಕ್ಕೆ ಲಭಿಸಿದಾಗ ನಾವು ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಉನ್ನತ ಹುದ್ದೆಗಳನ್ನು ಪಡೆದ ಬಳಿಕ ಸಮಾಜದ ಕಡೆಗೆ ಆಲೋಚಿಸುವ, ಬದುಕುವಂತಾಗಬೇಕು. ನಮ್ಮಿಂದಾಗಿ ಇನ್ನೊಬ್ಬರಿಗೆ ನೋವು ಉಂಟು ಮಾಡುವ ಕೆಲಸ ಮಾಡಬಾರದು. ಒಟ್ಟಿನಲ್ಲಿ ದೇಶದ ಉತ್ತಮ ಪ್ರಜೆಗಳಾಗುವ ಗುರಿಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದರು.


ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ದಿಕ್ಸೂಚಿ ಭಾಷಣಗೈದರು. ಯುವಪೀಳಿಗೆಯಲ್ಲಿ ಮೌಲ್ಯಗಳ ಅಳವಡಿಸುವುದು ರಾಮಕೃಷ್ಣ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. ಯುವ ಪೀಳಿಗೆಯಲ್ಲಿ ಜೀವನ ಮೌಲ್ಯಗಳನ್ನು ತುಂಬಲು ವಿವಿಧ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಳೆದ ಹತ್ತು ವರ್ಷಗಳಿಂದ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕರು-ಪ್ರಾಧ್ಯಾಪಕರಿಗಾಗಿ ಮತ್ತು ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಜ್ಞಾ, ಶ್ರದ್ಧಾ, ಮೇಧಾ ಎಂಬ ಮೂರು ದಿನಗಳ ವಿಚಾರಸಂಕಿರಣಗಳನ್ನು ಆಯೋಜಿಸುತ್ತಿದೆ. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಕಾನ್ಪುರ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಶ್ರದ್ಧಾನಂದಜಿ, ಹೈದರಾಬಾದ್‌ನ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಮತ್ತು ತಂತ್ರಜ್ಞ ಎಸ್.ಎನ್.ಶ್ರೀನಿವಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net