ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

H D Revanna
Published on

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ನ ಎಚ್.ಡಿ. ರೇವಣ್ಣ ಜಲಸಂಪನ್ಮೂಲ ಸಚಿವರಾಗದೇ ಇರುವುದಕ್ಕೆ ಕಾರಣ ಯಾರು ಗೊತ್ತಾ? ಕಾಂಗ್ರೆಸ್‌ನ ಯಾವ ಶಾಸಕ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಜೆಡಿಎಸ್ ಬೆಂಬಲ ನೀಡುತ್ತೆ?

- ಈ ಎಲ್ಲ ವಿಷಯಗಳು ಅಶ್ಲೀಲ ಸಿಡಿ ವಿಚಾರವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸಿದ ಧರಣಿ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ 10 ನಿಮಿಷ ಕಲಾಪ ಮುಂದೂಡಿದ ಅವಧಿಯಲ್ಲಿ ನಡೆದ ಸ್ವಾರಸ್ಯಕರ ಚರ್ಚೆಗಳು.

ನಿಮಗೋಸ್ಕರ ಜಲಸಂಪನ್ಮೂಲ ಖಾತೆ ಬಿಟ್ಟೆ: ಕಲಾಪದ ವಿರಾಮದ ವೇಳೆ ಕಾಂಗ್ರೆಸ್‌ನ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್. ಆರ್.ವಿ. ದೇಶಪಾಂಡೆ, ಶಿವಶಂಕರ ರೆಡ್ಡಿ ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಜೆಡಿಎಸ್‌ನ ಎಚ್.ಡಿ. ರೇವಣ್ಣ, ಕಾಂಗ್ರೆಸ್ ಅವಧಿಯಲ್ಲಿ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲೂ ಅವರಿಗೆ ಆ ಖಾತೆ ಸಿಗುತ್ತದೆ ಎಂದುಕೊಂಡಿದ್ದೆ. ಅದಕ್ಕೆ ನಾನು ಜಲಸಂಪನ್ಮೂಲ ಖಾತೆ ಬಗ್ಗೆ ಬೇಡಿಕೆ ಇಡಲಿಲ್ಲ ಎಂದರು. ಅದಕ್ಕೆ ಎಂ.ಬಿ. ಪಾಟೀಲ್ ನಕ್ಕು ಸುಮ್ಮನಾದರು.

ನೀವು ಸಿಎಂ ಆಗೋದಾದ್ರೆ ಜೈ ಅಂತೀವಿ: ನಂತರ ಆರ್.ವಿ. ದೇಶಪಾಂಡೆ ಕಡೆ ತಿರುಗಿದ ಎಚ್‌.ಡಿ. ರೇವಣ್ಣ, ಏನು ನಾಯಕರೆ? ನೀವು ಸಿಎಂ ಆಗೋದಾದ್ರೆ ಹೇಳಿ, ಜೆಡಿಎಸ್ ಶಾಸಕರೆಲ್ಲ ಜೈ ಅಂತೀವಿ ಎಂದರು.

ಅದಕ್ಕೆ ಆರ್.ವಿ. ದೇಶಪಾಂಡೆ, ರೇವಣ್ಣ ಅವರಿಗೆ ಕೈಮುಗಿದು, ನಾನು ಒಂದು ಡಜನ್ ಸಿಎಂಗಳನ್ನು ನೋಡಿದ್ದೇನೆ. ನನಗೆ ಆ ಪದವಿ ಬೇಡ ಎಂದು ಹೇಳಿದರು.

ಒಂದಾದ ಕಾಂಗ್ರೆಸ್-ಬಿಜೆಪಿ ಶಾಸಕರು: ಕಲಾಪ ಮುಂದೂಡುವುದಕ್ಕೂ ಮುನ್ನ ಪರಸ್ಪರ ಆರೋಪ - ಪ್ರತ್ಯಾರೋಪದಲ್ಲಿ ತೊಡಗಿದ್ದ ಕಾಂಗ್ರೆಸ್-ಬಿಜೆಪಿ ಶಾಸಕರು, ನಂತರ ಒಬ್ಬರಿಗೊಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದರು. ಬಿಜೆಪಿಯ ರಾಜೂ ಗೌಡ, ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಅವರಿದ್ದಲ್ಲಿಗೆ ಬಂದು, 15 ನಿಮಿಷಗಳ ಕಾಲ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಶಾಸಕರ ಬಳಿ ಇದ್ದ ಸಿಡಿಯನ್ನು ಮೈಕ್‌ಗೆ ಸಿಕ್ಕಿಸಿ ತಮಾಷೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net