

ಶಿವಮೊಗ್ಗ: ಕಾಂಗ್ರೆಸ್ನಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರೆಲ್ಲ ಬೀದಿಗಿಳಿದರೆ ತಡೆಯಲು ಯಾವ ಪೊಲೀಸರಿಂದಲೂ ಸಾಧ್ಯವಿಲ್ಲ.
- ಹೀಗೆಂದು ಎಚ್ಚರಿಕೆ ಕೊಟ್ಟಿದ್ದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಅವರು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಎಚ್ಚರಿಕೆಯನ್ನೂ ನೀಡಿದ್ದಾರೆ.
ಇಂದಿನ ಜನಾಕ್ರೋಶ ಪ್ರತಿಭಟನೆ ಕೇವಲ ಸಂಗಮೇಶ್ವರ ಅವರನ್ನು ರಕ್ಷಣೆ ಮಾಡಲು ಅಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರ ಮೇಲೆ ಸರ್ಕಾರ ಹಾಗೂ ಪೊಲೀಸರು ಸುಳ್ಳು ಕೇಸು ಹಾಕಿದರೆ ಕಾಂಗ್ರೆಸ್ ಸಹಿಸುವುದಿಲ್ಲ ಎಂಬುದನ್ನು ಸಾರಲು ಈ ಪ್ರತಿಭಟನೆ. ಇದು ಪ್ರಜಾಪ್ರಭುತ್ವ. ಪೊಲೀಸರನ್ನು ನೇಮಿಸಿಕೊಂಡಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಎಂದ ಅವರು, ನಾನು ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡುತ್ತಿಲ್ಲ. ಆದರೆ ಪೊಲೀಸರೂ ಅರ್ಥ ಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಸಂಗಮೇಶ್ವರ ಹಾಗೂ ಆತನ ಕುಟುಂಬದವರು-ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳುಕೇಸು ದಾಖಲಿಸಿದ್ದಾರೆ. ಸುಳ್ಳುಕೇಸ್ ದಾಖಲಿಸಿದ್ದೀರಿ, ಬಿ-ರಿಪೋರ್ಟ್ ಹಾಕಿ ಎಂದು ಎಸ್ಪಿ ಬಳಿ ಮಾತನಾಡಿದ್ದೆ. ಆದರೆ ಅದರ ಮರುದಿನವೇ ಸಂಗಮೇಶ್ವರ ಅವರ ಮಗನನ್ನು ಬಂಧಿಸಿದ್ದಾರೆ. ಅಂದು ಕಬಡ್ಡಿ ಪಂದ್ಯಾವಳಿಯಲ್ಲಿ ಅನಗತ್ಯವಾಗಿ ಜೈಶ್ರೀರಾಮ್ ಎಂದು ಕೂಗಿ ಕೋಮುಪ್ರಚೋದನೆಗೆ ಮುಂದಾಗಿದ್ದು ಯಾರು? ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸೆಕ್ಷನ್ 307 ದಾಖಲಿಸಿ ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೂ 307 ಕೇಸು ದಾಖಲಾಗಿದೆ. ಆದರೆ ಅವರನ್ನು ಇದುವರೆಗೆ ಏಕೆ ಬಂಧಿಸಿಲ್ಲ? ಇದು ನೀವು ಸರ್ಕಾರ ಹೇಳಿದಂತೆ ಕುಣಿಯುತ್ತಿದ್ದೀರಿ ಎಂದು ತೋರಿಸುವುದಿಲ್ಲವೇ ಎಂದು ಎಸ್ಪಿಯವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ಇದೇ ರೀತಿ ಪೊಲೀಸರ ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು. ಇನ್ನೆರಡು ವರ್ಷ ಅಷ್ಟೇ ಈ ಸರ್ಕಾರದ ಅವಧಿ. ಅಷ್ಟರೊಳಗಾಗಿ ಸರ್ಕಾರ ಬಿದ್ದು ಹೋದರೂ ಹೋಗಬಹುದು. ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಚ್ಚರಿಕೆ ಇರಲಿ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ. 17 ಜನ ಶಾಸಕರನ್ನು ಕೋಟಿ ಕೋಟಿ ಕೊಟ್ಟು ಖರೀದಿಸಿದ್ದಾರೆ. ಕೋಟ ಕೋಟಿ ಲೂಟಿ ಹೊಡೆದು ಶಿವಮೊಗ್ಗದಲ್ಲಿ ಕೆಲವರು ಆಸ್ತಿ ಮಾಡಿದ್ದಾರೆ, ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಪೊಲೀಸರಿಗೆ ಸಂಬಳ ನೀಡುವುದು ಜನರ ತೆರಿಗೆ ಹಣ. ಪೊಲೀಸರಿಗೆ ಸಂಬಳವೂ ಇದೆ ಗಿಂಬಳವೂ ಇದೆ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿರುವ ಲಕ್ಷಾಂತರ ಕಾರ್ಯಕರ್ತರು ಬೀದಿಗಿಳಿದರೆ ಅವರನ್ನು ತಡೆಯಲು ಯಾವ ಪೊಲೀಸರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.