

ಕೋಟ: ರೈತ ಕಾಯಕವಿದ್ದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಕ್ಲಿಷ್ಟಕರ ದಿನಗಳನ್ನು ಕಾಣಬೇಕಾದೀತು ಎಂದು ಬ್ರಹ್ಮಾವರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಹೇಳಿದರು.
ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 46ನೇ ಮಾಲಿಕೆ ಐರೋಡಿ ರಘುರಾಮ ಮಡಿವಾಳ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತ ಸಾಧಕ ರಘುರಾಮ ಮಡಿವಾಳ ದಂಪತಿಗಳನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು. ರೈತರೆಡೆಗೆ ಕಾರ್ಯಕ್ರಮದ ವಿಶೇಷತೆಯ ಅಂಗವಾಗಿ ಗೋ ಪೂಜೆ ನೆರವೇರಿಸಿಕೊಂಡು ಗಿಡ ನೆಟ್ಟು ಪರಿಸರ ಜಾಗೃತಿ ಮೆರೆಯಲಾಯಿತು.
ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅಭ್ಯಾಗತರಾಗಿ ಸ್ಥಳೀಯ ಸಾಂಸ್ಕೃತಿಕ ಚಿಂತಕ ಭೀಷ್ಮಗೋಪಾಲ್, ಸ್ನೇಹಕೂಟದ ಕೋಶಾಧಿಕಾರಿ ವಿಜಯಲಕ್ಷ್ಮೀ ಭಟ್, ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ಯುವಕ ಮಂಡಲದ ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.