ರಸ್ತೆ, ಚರಂಡಿ ನಿರ್ವಹಣೆಗೆ ಎಷ್ಟು ಜನರ ನೇಮಕವಾಗಿದೆ?

gan (9)
Published on

ಕುಂದಾಪುರ: ಮಳೆಗಾಲದಲ್ಲಿ ರಸ್ತೆ ನಿರ್ವಹಣೆ, ಚರಂಡಿ ಸ್ವಚ್ಛಗೊಳಿಸಲು 30 ಕಿ.ಮೀ.ಗೆ ಒಬ್ಬರಂತೆ ನೇಮಕ ಮಾಡಿಕೊಳ್ಳಲು ಲೋಕೋಪಯೋಗಿ ಇಲಾಖೆಗೆ ಸರ್ಕಾರ ಆದೇಶ ನೀಡಿದೆ. ಸ್ವತಃ ಸಚಿವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕುಂದಾಪುರ ಉಪವಿಭಾಗದಲ್ಲಿ ಎಷ್ಟು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ, ಯಾರ‌್ಯಾರನ್ನು ಎಲ್ಲೆಲ್ಲಿ ನಿಯೋಜಿಸಲಾಗಿದೆ ಎಂಬ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ನಿಮಗೇ ಸರಿಯಾದ ಮಾಹಿತಿ ಇಲ್ಲ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ ಪ್ರಕರಣಗಳಿಗೆ ಪರಿಹಾರ ಪಾವತಿ ಹಾಗೂ ಮುಂಗಾರು ಮಳೆ ಮುಂಜಾಗ್ರತಾ ಕ್ರಮಗಳ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಶಾಸಕರು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಸುರಿದ ಮಳೆ ಸಂದರ್ಭ ಒಂದೇ ಒಂದು ರಸ್ತೆಯ ಚರಂಡಿಯನ್ನು ಸ್ವಚ್ಛಗೊಳಿಸಿಲ್ಲ, ಒಂದು ಕಡೆಯೂ ಹಿಟಾಚಿ, ಜೆಸಿಬಿ ಕೆಲಸ ಮಾಡಿಲ್ಲ. ಆಯಾ ಗ್ರಾಮ ಪಂಚಾಯಿತಿಯವರೇ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಶಾಸಕ ಕೊಡ್ಗಿ ಹೇಳಿದರು. ಬಿತ್ತನೆ ಬೀಜಗಳ ದಾಸ್ತಾನು: ಶೇ.95ರಷ್ಟು ಕಿಂಡಿ ಅಣೆಕಟ್ಟುಗಳ ಹಲಗೆಯನ್ನು ತೆಗೆಯಲಾಗಿದೆ. ಬಾಕಿ ಉಳಿದ ಕಿಂಡಿ ಅಣೆಕಟ್ಟುಗಳ ಹಲಗೆಯನ್ನು ನೀರಿನ ಒತ್ತಡ ಕಡಿಮೆಯಾದ ಬಳಿಕ ತೆಗೆಯಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ತಿಳಿಸಿದರು. ರೈತರಿಗೆ ಬಿತ್ತನೆಗೆ ಬೇಕಾಗುಷ್ಟು ಬೀಜಗಳ ದಾಸ್ತಾನು ಇದೆ. ಸುಮಾರು 375 ಕ್ವಿಂಟಾಲ್ ಬೀಜದ ಬೇಡಿಕೆ ಇದ್ದು 165 ಕ್ವಿಂಟಾಲ್ ಬೀಜವನ್ನು ಮಾರಾಟ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ರೂಪಾ ಮಾಡ ಹೇಳಿದರು. ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಕನ್ವರ್ಷನ್ ಮಾಡಿಕೊಳ್ಳದೆ ಗದ್ದೆಯಲ್ಲಿ ಮಣ್ಣು ತುಂಬಿಸಿ ಜಾಗವನ್ನು ಎತ್ತರಿಸಲಾಗುತ್ತಿದೆ. ಮಳೆ ನೀರು ಹರಿವಿಗೆ ತೊಂದರೆಯಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು. ಗಾಳಿ ಮಳೆಗೆ ಹಾನಿಯಾದ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದೆ. ಕುಂದಾಪುರ ವಿಭಾಗದಲ್ಲಿ 52 ಕಂಬಗಳಿಗೆ ಹಾನಿಯಾಗಿ 8.9 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿ ಹೇಳಿದರು. ಬ್ರಹ್ಮಾವರ ತಹಸೀಲ್ದಾರ್ ಶೀಕಾಂತ ಹೆಗ್ಡೆ, ಕಾರ್ಕಳ ತಹಸೀಲ್ದಾರ್ ಎನ್.ಎ.ಪ್ರಸಾದ್, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ. ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.

24x7 ಕಂಟ್ರೋಲ್ ರೂಂ

ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ತಾಲೂಕು ಮಟ್ಟದಲ್ಲಿ 24*7 ಕಂಟ್ರೋಲ್ ರೂಂ ತೆರೆಯಲಾಗಿದೆ. ಗ್ರಾಮ ಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ವಿಲೇಜ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇತ್ತೀಚಿಗೆ ಸುರಿದ ಮಳೆಯಿಂದ ತೋಟಗಾರಿಕಾ ಇಲಾಖೆಯಲ್ಲಿ 10 ಪ್ರಕರಣಗಳು ದಾಖಲಾಗಿದೆ. ತಾಲೂಕಿನಲ್ಲಿ 22 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈವರೆಗೆ ಹಾನಿಯಾದ ಎಲ್ಲ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ ಎಂದು ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ par ಹೇಳಿದರು.

ಬೆಳೆ ವಿಮೆ ಬಗ್ಗೆ ಆದೇಶ ಬಂದಿಲ್ಲ

ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಮಳೆಯಿಂದ ಬೆಳೆ ಹಾನಿ ಪ್ರಕರಣಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಹವಾಮಾನ ಬೆಳೆ ಆಧಾರಿತ ಬೆಳೆ ವಿಮೆ ಬಗ್ಗೆ ಸರ್ಕಾರ ಆದೇಶ ಹೊರಡಿಸಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳಿದರು. 1 ಲಕ್ಷ ರೂ. ಬೆಳೆ ಹಾನಿ ಆದರೆ 2-3 ಸಾವಿರ ರೂ. ಪರಿಹಾರ ಸಿಗುತ್ತದೆ. ಇದಕ್ಕಾಗಿ ಹತ್ತಾರು ಬಾರಿ ಕಚೇರಿ ಅಲೆಯಬೇಕು. ಹಾಗಾಗಿ ಬೆಳೆ ಹಾನಿ ಪಡೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಪಂ. ಅಧ್ಯಕ್ಷರೊಬ್ಬರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net