

ಬೆಂಗಳೂರು: ಸೋಷಿಯಲ್ ಮೀಡಿಯಾದ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಫೀಮೇಲ್ ಹೆಸರಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಈ ಖದೀಮರು, ಮೈಮುಟ್ಟದ ಬಟ್ಟೆ ಬಿಚ್ಚಿಸಿ ಹಣ ವಸೂಲಿ ಮಾಡುತ್ತಿದ್ದರು.
ಸಾಕಿರ್, ಕಸಮ್ ಖಾನ್, ಜಮೀಲ್ ಖಾನ್ ಬಂಧಿತ ಆರೋಪಿಗಳು. ಈ ಮೂವರು ಮೂಲತಃ ರಾಜಸ್ಥಾನದವರಾಗಿದ್ದು, ಇವರನ್ನು ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಸಿಐಡಿಯಲ್ಲಿ ದಾಖಲಾಗಿದ್ದ ಸಾಲು ಸಾಲು ದೂರುಗಳ ಹಿನ್ನೆಲೆಯಲ್ಲಿ ತನಿಖೆಗಿಳಿದ ಪೊಲೀಸರು ಈ ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಹುಡುಗಿಯರ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದ ಈ ಆರೋಪಿಗಳು, ಫೇಸ್ಬುಕ್ ಮೂಲಕವೇ ಯುವಕರ ಮೊಬೈಲ್ಫೋನ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಿದ್ದರು. ವಿಡಿಯೋ ಕಾಲ್ನಲ್ಲಿ ಲೈಂಗಿಕ ಪ್ರಚೋದನೆ ಕೊಡುವ ರೀತಿಯಲ್ಲಿ ಮಾತನಾಡಿಸಿ, ಅವರನ್ನು ವಿವಸ್ತ್ರಗೊಳಿಸುತ್ತಿದ್ದರು. ಬಳಿಕ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುತ್ತಿದ್ದುದಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಹಣ ಸುಲಿಯುತ್ತಿದ್ದರು.
ವ್ಯವಸ್ಥಿತ ಜಾಲ ರಚಿಸಿಕೊಂಡು ವಂಚನೆ ಮಾಡುತ್ತಿದ್ದ ರಾಜಸ್ಥಾನದ ಈ ಗ್ಯಾಂಗ್ ಅಲ್ಲಿನ ಎರಡು ಜಿಲ್ಲೆಗಳಲ್ಲಿ ಬೀಡು ಬಿಟ್ಟಿದೆ. ಬೆಂಗಳೂರಿನಲ್ಲೂ ಕುಕೃತ್ಯ ನಡೆಸುತ್ತಿರುವ ಈ ಗ್ಯಾಂಗ್ ಬಗ್ಗೆ ಸಿಐಡಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ಆ ನಿಟ್ಟಿನಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.