

ಧಾರವಾಡ: ಎರಡು ತಿಂಗಳೊಳಗೆ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಪದಾಧಿಕಾರಿಗಳ ಚುನಾವಣೆಯನ್ನು ನಡೆಸುವಂತೆ ಧಾರವಾಡ ಹೈಕೋರ್ಟ್ ಪೀಠ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿ ಪಾಟೀಲ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ, ನ್ಯಾಯಾಲಯ ಈ ಸೂಚನೆ ನೀಡಿದೆ.
2021 ರ ಮೇ 9 ರಂದು ನಡೆಯಬೇಕಿದ್ದ ಕಸಾಪ ಚುನಾವಣೆಯನ್ನು ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಕರೊನಾ ಸೋಂಕು ತಗ್ಗಿದ್ದು, ಮೂರು ಪಾಲಿಕೆ ಚುನಾವಣೆಗಳೂ ನಡೆದಿವೆ. ಎಲ್ಲ ಚುನಾವಣೆ ನಡೆಯುವಾಗ ಇದಕ್ಕೇಕೆ ತಡೆ ಅಂತ ಶೇಖರಗೌಡ ಮಾಲಿ ಪಾಟೀಲ್ ಅವರು ಹೈಕೋರ್ಟ್ಗೆ ಮೊರೆಹೋಗಿದ್ದರು.
ಒಂದೂವರೆ ತಿಂಗಳ ಹಿಂದೆಯೇ ಸರಕಾರಕ್ಕೆ ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದರೂ, ಸರ್ಕಾರದಿಂದ ಯಾವುದೇ ಸ್ಪಂದನೆ ಬಂದಿಲ್ಲ ಎಂದು ಮಾಲಿ ಪಾಟೀಲ್ ಹೇಳಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, 2 ತಿಂಗಳಲ್ಲಿ ಕಸಾಪ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.