ಇದು ವಿಧಾನಸಭೆಯೋ.. ಪಾರ್ಲಿಮೆಂಟೋ..? ಸದನದಲ್ಲಿ ಸಿದ್ದರಾಮಯ್ಯಗೆ ಮಾಧುಸ್ವಾಮಿ ಪ್ರಶ್ನೆ!

madhuswami
Published on

ಬೆಂಗಳೂರು: ಇಂದಿನ ವಿಧಾನಸಭಾ ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬೆಲೆ ಏರಿಕೆ ಬಗ್ಗೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿದರು. ತದನಂತರ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದು, ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟಿತು.

ಬೆಲೆ ಏರಿಕೆ ಕುರಿತ ನಿಲುವಳಿ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಆರಂಭಿಸಿದರು. ಆಯಿಲ್ ಬಾಂಡ್​​ಗಳ ಕುರಿತಂತೆ ಅಂಕಿಅಂಶಗಳ ಸಮೇತ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಹಿನ್ನೆಲೆಯಲ್ಲಿ, ಸಚಿವ ಮಾಧುಸ್ವಾಮಿ ಮಧ್ಯಪ್ರವೇಶ ಮಾಡಿದರು. "ಇದು ವಿಧಾನಸಭೆಯೋ ಅಥವಾ ಪಾರ್ಲಿಮೆಂಟೋ?" ಎಂದು ಕೆಣಕಿದ ಮಾಧುಸ್ವಾಮಿ, "ಆಯಿಲ್ ಬಾಂಡ್ ಬಗ್ಗೆ ಇಲ್ಲಿ ಯಾಕೆ ಹೇಳ್ತಿದ್ದೀರಿ? ಇಲ್ಲಿಗೆ ಏನು ಸಂಬಂಧ ಅದು? ಎಂದು ಪ್ರಶ್ನಿಸಿದರು. ಸಂಸತ್​​ಗೆ ಹೋಗಿ ಮಾತನಾಡಿ ಎಂದರು.

ಆಗ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಆಯಿಲ್ ಬಾಂಡ್ ಬಗ್ಗೆ ಸ್ಪಷ್ಟೀಕರಣ ಕೊಡಲು ಮುಂದಾದ ಸಚಿವ ಡಾ. ಸುಧಾಕರ್ ಮಧ್ಯಪ್ರವೇಶಕ್ಕೆ ಕಾಂಗ್ರೆಸ್​ ಶಾಸಕರು ವಿರೋಧ ವ್ಯಕ್ತಪಡಿಸಿದರು. ಆಗ, "ನೀವ್ಯಾಕೆ ಹೇಳ್ತೀರಿ? ಅದು ನಮ್ಮ ಕೆಲಸ ಅಲ್ಲ" ಎಂದು ಮಾಧುಸ್ವಾಮಿ ಸುಧಾಕರ್​​ಗೆ ಹೇಳಿದರು. ಎರಡೂ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದಂತೆ, ಕಾಂಗ್ರೆಸ್​ ನಾಯಕ ಕೃಷ್ಣ ಬೈರೇಗೌಡ ವಿಷಯಾಂತರ ಮಾಡ್ತಿದ್ದಾರೆ ಎಂದು ಟೀಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net