

ಬೆಳಗಾವಿ: ಜಿಲ್ಲಾದ್ಯಂತ 46 ಧಾರ್ಮಿಕ ಕೇಂದ್ರಗಳ ತೆರವಿಗೆ ನಿರ್ಧರಿಸಿದ್ದು, ಅದರಲ್ಲಿ 17 ಕೇಂದ್ರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಗಣೇಶೋತ್ಸವ ಮುಗಿದ ಬಳಿಕ ಬಾಕಿ ಇರುವ ದೇಗುಲಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಪ್ಪಾಣಿ ತಾಲೂಕಿನಲ್ಲಿ ನಾಲ್ಕು ಧಾರ್ಮಿಕ ಕೇಂದ್ರ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ದೇವಸ್ಥಾನ ಮಂಡಳಿಗಳ ವಿಶ್ವಾಸ ಪಡೆದು ಬಾಕಿ ಉಳಿದಿರುವ ದೇವಸ್ಥಾನಗಳನ್ನು ಯಾವುದೇ ತೊಂದರೆ ಆಗದಂತೆ ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಕೆಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ತೆರವುಗೊಳಿಸಲು ಅಥವಾ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಿವೆ ಎಂದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆಲವರು ತಮ್ಮ ಕಟ್ಟಡ ತೆರವುಗೊಳಿಸಬಾರದು ಎಂಬ ಉದ್ದೇಶದಿಂದ ಅಲ್ಲಿಯೇ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಅಂತಹ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸತ್ಯಾಸತ್ಯತೆಯ ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ. ಅದರಂತೆ ದೇವಸ್ಥಾನ ಗಳನ್ನು ತೆರವುಗೊಳಿಸಲಾಗುವುದು. ತುಂಬಾ ಹಳೆಯ ದೇವಸ್ಥಾನಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಿಎಂ ವಾತ್ಸಲ್ಯ ಯೋಜನೆ ಜಾರಿ: ಜಿಲ್ಲೆಯಲ್ಲಿರುವ ಮಕ್ಕಳ ಆರೋಗ್ಯ ದೃಷ್ಟಿಯಿಂದ ‘ಮುಖ್ಯಮಂತ್ರಿ ವಾತ್ಸಲ್ಯ ಯೋಜನೆ’ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ 18 ಲಕ್ಷ ಮಕ್ಕಳಿದ್ದಾರೆ. ಹೀಗಾಗಿ ಪ್ರತಿ ಹಳ್ಳಿಗಳಲ್ಲಿ 221 ತಂಡ ರಚಿಸಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈಗಾಗಲೇ ಶೇ. 70ರಷ್ಟು ಮಕ್ಕಳ ಸ್ಕ್ರೀನಿಂಗ್ ಮಾಡಲಾಗಿದೆ. ಒಂದು ವಾರದಲ್ಲಿ ಬಾಕಿ ಉಳಿದ ಮಕ್ಕಳನ್ನೂ ಸ್ಕ್ರೀನಿಂಗ್ ಮಾಡಲಾಗುವುದು. ಪೌಷ್ಟಿಕ ಆಹಾರ ವಿತರಣೆ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
ಬ್ಲಾೃಕ್ ಫಂಗಸ್ ಔಷಧಕ್ಕೆ ಬೇಡಿಕೆ: ಬ್ಲಾೃಕ್ ಫಂಗಸ್ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಗುಣಮುಖರಾದವರೂ ಸಹ ಔಷಧ ಕೇಳುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಕರೊನಾ ಸೋಂಕು ಜಿಲ್ಲೆಯಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಜನರು ಆತಂಕಪಡುವ ಅವಶ್ಯಕತೆ ಇಲ್ಲ. ದೊಡ್ಡ ಜಿಲ್ಲೆಯಾಗಿರುವುದರಿಂದ ಅಲ್ಲಲ್ಲಿ ಸಮಸ್ಯೆ ಕಾಣುತ್ತಿದ್ದು, ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹಿರೇಮಠ ತಿಳಿಸಿದರು.