

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಬೊಳುಂಬುಡ ಪ್ರದೇಶದಲ್ಲಿ ಭಾನುವಾರ ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಉಂಟಾದ ವ್ಯಾಪಕ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಈ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದರು.
ಹಿರೇಬಂಡಾಡಿ ಗ್ರಾಮದ ಬೊಲುಂಬುಡ ಮಜಿಕೂಡೇಲು ನಿವಾಸಿ ರುಕ್ಮಿಣಿ ಎಂಬುವರ ಮನೆಯ ಮೇಲೆ ಮರವೊಂದು ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಇವರ ತೋಟದಲ್ಲಿ 600 ಅಡಕೆ, 10 ತೆಂಗು, ನೀರಿನ ಟ್ಯಾಂಕ್ ದೂರಕ್ಕೆ ಎಸೆಯಲ್ಪಟ್ಟು ಪುಡಿಯಾಗಿದೆ. ಕೇದಗೆದಡಿ ಪರಿಸರದಲ್ಲಿ ಧನಂಜಯ ಗೌಡ ಎಂಬುವರ ತೋಟದಲ್ಲಿ 500 ಅಡಕೆ ಮರ, 5 ತೆಂಗು, 5 ವಿದ್ಯುತ್ ಕಂಬಗಳು ಧರೆಗುರುಳಿವೆ. ಜನಾರ್ದನ ಗೌಡ ಎಂಬುವರ ತೋಟದಲ್ಲಿ 450 ಅಡಕೆ ಮರ, 4 ತೆಂಗು, ಮನೆಯ ಸಿಮೆಂಟು ಶೀಟು ಹಾರಿ ಹೋಗಿದೆ. ಚಿದಾನಂದ ಎಂಬುವರ ತೋಟದಲ್ಲಿ 35 ಅಡಕೆ, 5 ವಿದ್ಯುತ್ ಕಂಬ, ಫಾರೂಕ್ ಎಂಬುವರ ತೋಟದಲ್ಲಿ 50 ಅಡಕೆ ಮರ, ದಿನೇಶ್ ಎಂಬುವರ ತೋಟದಲ್ಲಿ 25 ಅಡಕೆ ಮರ, ಬರಮೇಲು ಹೊನ್ನಪ್ಪ ಗೌಡ ಎಂಬವರ ತೋಟದಲ್ಲಿ 100 ಅಡಕೆ ಮರ, ವಾಸಪ್ಪ ಗೌಡ ಎಂಬುವರ ತೋಟದಲ್ಲಿ 75 ಅಡಕೆ ಮರಗಳು ಧರೆಗುರುಳಿವೆ.
ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ
ಹಿರೇಬಂಡಾಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ, ಗ್ರಾ.ಪಂ. ಕಾರ‌್ಯದರ್ಶಿ ಸತೀಶ್ ಸೋಮವಾರ ಟನಾ ಸ್ಥಳ ಬೊಲುಂಬುಡ ಕೇದಗೆದಡಿ ನಿವಾಸಿಗಳಾದ ಧನಂಜಯ ಗೌಡ, ಜನಾರ್ದನ ಗೌಡ, ರುಕ್ಮಿಣಿ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಹಮ್ಮಬ್ಬ ಸೌಕತ್, ದಯಾನಂದ ಸರೋಳಿ, ಹೇಮಂತ ಮತ್ತಿತರರು ಭೇಟಿ ನೀಡಿದರು.