

ಬದಿಯಡ್ಕ: ಆತ್ಮ, ಇಂದ್ರಿಯ, ಮನಸ್ಸಿನ ಪ್ರಸನ್ನತೆಗೆ ಯೋಗಾಸನಗಳು ಅತ್ಯುತ್ತಮ ಔಷಧ ಎಂದು ಮೆಕ್ಸಿಕೊದ ಯೋಗ ರಾಯಭಾರಿ ವಿಜಯ ಗಣೇಶ್ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಯುವಜನ ಕ್ಷೇಮ ಮತ್ತು ಕ್ರೀಡಾ ಮಂತ್ರಾಲಯದ ಅಂಗೀಕಾರ ಇರುವ ‘ಯೋಗಾಸನ ಭಾರತ’ ಕೇರಳ ರಾಜ್ಯ ಘಟಕವಾದ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಕೇರಳದ ಜಿಲ್ಲಾ ಘಟಕ ‘ಯೋಗಾಸನ ಕಾಸರಗೋಡು’ ಶನಿವಾರ ಮತ್ತು ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಯೋಗ ಉತ್ಸವ 2025 ಕಾರ್ಯಕ್ರಮದ ಸಮಾರೋಪವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಯೋಗಾಸನ ಕಾಸರಗೋಡು ಅಧ್ಯಕ್ಷ ರವಿಶಂಕರ ನೆಗಲಗುಳಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಅಶ್ವಿನಿ ಎಂ.ಎಲ್., ಯೋಗಾಸನ ಕೇರಳ ರಾಜ್ಯ ಕಾರ್ಯದರ್ಶಿ ಶಾಮಿಲ್ ಮೋನ್, ಬ್ಲಾಪಂ ಸದಸ್ಯೆ ಅಶ್ವಿನಿ ಮೊಳೆಯಾರ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ನೀರ್ಚಾಲು ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ಜಯಲಕ್ಷ್ಮೀ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾಲತಿ ವೈ., ಶಾಲಾ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ರಾಜನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ಗಾಯತ್ರಿ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ ಅಗಲ್ಪಾಡಿ ವಂದಿಸಿದರು. ಗಣೇಶ್ ಪೆರ್ವ ಬೇಳ ನಿರೂಪಿಸಿದರು.