

ಮಂಡ್ಯ: ಕ್ರಿಸ್ಮಸ್ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತಧರ್ಮದತ್ತ ಸೆಳೆಯಲು ಯತ್ನಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾನ್ವೆಂಟ್ವೊಂದರ ಮೇಲೆ ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಅಲ್ಲಿನ ಕ್ರಿಸ್ಮಸ್ ಆಚರಣೆಗೂ ಆಕ್ಷೇಪ ಒಡ್ಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದ ನಿರ್ಮಲಾ ಕಾನ್ವೆಂಟ್ನಲ್ಲಿ ಇಂಥದ್ದೊಂದು ಮತಾಂತರ ಪ್ರಯತ್ನದ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕಾನ್ವೆಂಟ್ನಲ್ಲಿ ಕ್ರಿಸ್ಮಸ್ ಆಚರಣೆಗೆ ಹಾಜರಿರಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕ್ರಿಸ್ಮಸ್ ನೆಪದಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮದತ್ತ ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ನಡವಳಿಕೆಯಲ್ಲೂ ಬದಲಾವಣೆ ಕಂಡುಬರುತ್ತಿದೆ ಎಂದು ದಾಳಿ ನಡೆಸಿದ ಕಾರ್ಯಕರ್ತರು ಆರೋಪಿಸಿದ್ದಾರೆ.
ಶಾಲಾ-ಕಾಲೇಜುಗಳು ಧರ್ಮಾತೀತವಾಗಿರಬೇಕು. ನಿರ್ಮಲಾ ಕಾನ್ವೆಂಟ್ನಲ್ಲಿ ಕ್ರಿಸ್ಮಸ್ ಆಚರಣೆ ಮೂಲಕ ಧರ್ಮಪ್ರಚಾರ ಮಾಡಲಾಗುತ್ತಿದೆ. ಕ್ರಿಸ್ಮಸ್ ಆಚರಣೆ ಮಾಡಲೇಬೇಕು ಎನ್ನುವುದಾದರೆ ಹಿಂದೂ ದೇವರ ಫೋಟೋ ಕೂಡ ಹಾಕಿ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.