

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ಕೊಟ್ಟಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸದ್ಯ ವಾಡಿಕೆಗಿಂತ 1-2 ಡಿ.ಸೆ. ಉಷ್ಣಾಂಶ ದಾಖಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿ.ಸೆ. ದಾಟಿದರೆ ಅಥವಾ ವಾಡಿಕೆಗಿಂತ 3-4 ಡಿ.ಸೆ. ಅಧಿಕ ದಾಖಲಾದರೆ ಉಷ್ಣ ಅಲೆ ಬೀಸಲಿದೆ. ಈ ಸಂದರ್ಭದಲ್ಲಿ ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ತಾಪಮಾನ ಹೆಚ್ಚಿದಂತೆ ಜನರಿಗೆ ಊತ, ತಲೆನೋವು, ವಾಕರಿಕೆ, ರ್ನಿಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳೂ ಕಾಡಲಿವೆ. ಜನರಿಗೆ ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಲಬರುಗಿ, ವಿಜಯಪುರ, ರಾಯಚೂರು, ಕೊಪ್ಪಳ, ಬಾಗಲಕೋಟೆ, ದಾವಣಗೆರೆ, ಗದಗ, ಬಳ್ಳಾರಿ, ಧಾರವಾಡ, ಹಾವೇರಿ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗುತ್ತಿದೆ. ಸೋಮವಾರ ಕಲಬುರಗಿಯಲ್ಲಿ 39.9 ಡಿ.ಸೆ. ದಾಖಲಾಗಿತ್ತು. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ಹಾಸನದಲ್ಲಿಯೂ ವಾಡಿಕೆಗಿಂತ 1-3 ಡಿ.ಸೆಗಿಂತ ಅಧಿಕ ಉಷ್ಣಾಂಶ ವರದಿಯಾಗಿದೆ. ತುಮಕೂರಿನಲ್ಲಿ ವಾಡಿಕೆಗಿಂತ 3.3 ಹಾಗೂ ಮಂಡ್ಯದಲ್ಲಿ 1.7 ಡಿ.ಸೆ. ಅಧಿಕ ದಾಖಲಾಗಿದೆ. ಬೆಂಗಳೂರಿನಲ್ಲಿ ವಾಡಿಕೆಯಂತೆ 34 ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಬೇಕಿತ್ತು. ವಾಡಿಕೆಗಿಂತ 1 ಡಿ.ಸೆ.ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಲವು ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ತಾಪಮಾನ ವರದಿಯಾಗಲಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಏರತೊಡಗಿದೆ. ಹವಾಮಾನ ವೈಪರಿತ್ಯದಿಂದಾಗಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ. ತೇವಾಂಶ ಭರಿತ ಮೋಡಗಳ ಸೆಳೆತ, ಗಾಳಿ ವೇಗ ಇಲ್ಲದಿರುವುದು, ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದಾಗಿ ಬಿಸಿಲಿನ ಝಳವು ಜನರನ್ನು ಬಾಧಿಸುವಂತಾಗಿದೆ.ಪ್ರತಿ ವರ್ಷವೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜನರಿಗೆ ಹಗಲು&ರಾತ್ರಿ ವೇಳೆ ಸೆಖೆಯ ಅನುಭವವಾಗುತ್ತಿದೆ.
ಕೋಟ್:
ರಾಜ್ಯದಲ್ಲಿ ಮಾ.30ರವರೆಗೆ ಮಳೆ ಮೂನ್ಸೂಚನೆ ಇಲ್ಲ. ಏಪ್ರಿಲ್ನಲ್ಲಿ ಮಳೆ ಸುರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಲಿದೆ. ಉಷ್ಣಾಂಶ ಹೆಚ್ಚಿದಂತೆ ಮಳೆ ಬರುವ ನಿರೀಕ್ಷೆಯಿದೆ.
| ಎ.ಪ್ರಸಾದ್, ಹವಾಮಾನ ಇಲಾಖೆ ವಿಜ್ಞಾನಿ.