

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಫಥಸಂಚಲನಕ್ಕೆ ನ. 16ರಂದು ಷರತ್ತು ಬದ್ದ ಅವಕಾಶ ನೀಡಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಚಿತ್ತಾಪುರದಲ್ಲಿ ನ. 02ರಂದು ನಡೆಸಲು ಉದ್ದೇಶಿಸಲಾಗಿದ್ದ ಆರೆಸ್ಸೆಸ್ ಪಥಸಂಚಲನಕ್ಕೆ ತಹಸೀಲ್ದಾರ್ ಅವಕಾಶ ನೀಡಿರಲಿಲ್ಲ. ತಹಶೀಲ್ದಾರ್ ಆದೇಶ ಪ್ರಶ್ನಿಸಿ ಅಶೋಕ ಪಾಟೀಲ್ ಎಂಬುವರು ಹೈಕೋರ್ಟ್ ಮೋರೆ ಹೋಗಿದ್ದರು. ಅಲ್ಲದೇ ಅಂದೇ ಅವಕಾಶ ನೀಡಲು ಇತರೆ ಸಂಘಟನೆಗಳು ಕೋರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಆದರೆ ಯಾವುದೇ ಫಲಪ್ರಧವಾಗಿರಲಿಲ್ಲ.
ಇನ್ನೂ ಆರ್ಎಸ್ಎಸ್ನ ಅಶೋಕ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಪೀಠ, ಕೇವಲ 300 ಸ್ವಯಂ ಸೇವಕರು ಮತ್ತು 50 ಜನರ ಬ್ಯಾಂಡ್ ಸೆಟ್ ಮೂಲಕ ಮಧ್ಯಾಹ್ನ 3.30ರಿಂದ ಸಂಜೆ 5.30 ಗಂಟೆವರೆಗೆ ಪಥಸಂಚಲನ, ಸಭೆ ನಡೆಸಬೇಕು. ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಮೆರವಣಿಗೆ, ಚಿತ್ತಾಪುರ ಬಿಟ್ಟು ಹೊರಗಿನವರು ಭಾಗವಹಿಸುವಂತಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರ ಹಿರಿಯ ವಕೀಲ ಅರುಣ್ ಶಾಮ್ ವಾದಿಸಿದ್ರೆ, ರಾಜ್ಯ ಸರ್ಕಾರದ ಪರವಾಗಿ ಎಜಿ ಶಶಿಕಿರಣ ಶೆಟ್ಟಿ ಪ್ರತಿವಾದಿಸಿದರು. ಎರಡು ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು ಷರತ್ತು ಬದ್ಧವಾಗಿ ಪಥಸಂಚಲನಕ್ಕೆ ಅವಕಾಶ ನೀಡಿದ್ದಾರೆ.