

ವಾಷಿಂಗ್ಟನ್: ಐತಿಹಾಸಿಕವಾಗಿ 1946ರ ಬಳಿಕ ಇದೇ ಮೊದಲ ಭಾರಿಗೆ ನಿನ್ನೆ(ನ. 12) ಸಿರಿಯನ್ ಅಧ್ಯಕ್ಷನೊಬ್ಬರು ಅಮೆರಿಕಾಕ್ಕೆ ಭೇಟಿ ನೀಡಿ ಶ್ವೇತಭವನದ ಅತಿಥ್ಯವನ್ನು ಸ್ವೀಕರಿಸಿದ್ದಾರೆ. ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರು ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಅವರು ಅಲ್-ಶರಾ ಅವರಿಗೆ ಸುಗಂಧ ಧ್ರವ್ಯದ ಬಾಟಲಿಯನ್ನು(ಸೆಂಟ್) ನೀಡಿದ್ದಾರೆ. ಹಾಗೆಯೇ ಅದನ್ನು ಸಿಂಪಡಿಸುತ್ತಾ, ಇದು ಅತ್ಯುತ್ತಮ ಸುಗಂಧ, ನಿಮಗೆ ಇನ್ನೊಂದು ನಿಮ್ಮ ಹೆಂಡತಿಗೆ ಎಂದು ತಮಾಷೆಯಾಗಿ ಎಷ್ಟು ಮಂದಿ ಹೆಂಡತಿಯರು ಎಂದು ಕೇಳಿದ್ದಾರೆ. ಅದಕ್ಕೆ ಮಾಜಿ ಅಲ್-ಖೈದಾ ಕಮಾಂಡರ್ ಅಹ್ಮದ್ ಅಲ್-ಶರಾ ಒಬ್ಬರೇ ಎಂದು ನಗುತ್ತಾ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಧ್ಯಕ್ಷ ಅಲ್-ಶರಾ ಅವರ ಭೇಟಿಯು 1946ರಲ್ಲಿ ಫ್ರಾನ್ಸ್ನಿಂದ ದೇಶ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾದ ನಾಯಕರೊಬ್ಬರು ಶ್ವೇತಭವನಕ್ಕೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದೆ. ಈ ಭೇಟಿಯು ಸಿರಿಯಾ ಮೇಲಿನ ನಿರ್ಬಂಧಗಳನ್ನು ಇನ್ನೂ 180 ದಿನಗಳವರೆಗೆ ಅಮೆರಿಕಾ ವಿಸ್ತರಿಸಿದೆ. ಇದೇ ವೇಳೆ ಟ್ರಂಪ್ ಜೊತೆ ಅಲ್-ಶರಾ ಪ್ರಾದೇಶಿಕ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ಸಿರಿಯಾ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತವನ್ನು ದಾಳಿಯ ಮೂಲಕ ಅಲ್-ಶರಾ ನೇತೃತ್ವದ ಇಸ್ಲಾಮಿಸ್ಟ್ ಪಡೆಗಳು ವಶಕ್ಕೆ ಪಡೆದು ಅಧಿಕಾರಕ್ಕೆ ಬಂದಿವೆ. ಈ ಹಿಂದೆ ಅಮೆರಿಕಾ ಇದೇ ಅಲ್ ಖೈದಾ ಕಮಾಂಡರ್ ಆಗಿದ್ದ ಅಲ್-ಶರಾ ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ, ಅವರನ್ನು ಹಿಡಿಯಲು 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. (ಏಜೆನ್ಸೀಸ್)