ದೆಹಲಿ ಕಾರು ಸ್ಫೋಟ; ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮನೂ ಭಯೋತ್ಪಾದಕನಲ್ಲ; ಸಿಎಂ ಓಮರ್ ಅಬ್ದುಲ್ಲಾ| CM Omar Abdullah

ವಿಜಯವಾಣಿ - 2025-11-13T155910.576
Published on

ಜಮ್ಮು: ದೆಹಲಿಯ ಕೆಂಪುಕೋಟೆ ಬಳಿ 12 ಮಂದಿಯ ಸಾವಿಗೆ ಕಾರಣವಾದ ನ. 10ರ ಕಾರು ಸ್ಫೋಟ ಪ್ರಕರಣದಲ್ಲಿ ಕೆಲವು ಕಾಶ್ಮೀರಿ ವೈದ್ಯರನ್ನು ಬಂಧಿಸಿದ ಹಿನ್ನೆಲೆ, ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮನೂ ಭಯೋತ್ಪಾದಕನಲ್ಲ ಎಂದು ಗುರುವಾರ(ನ. 13) ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ(CM Omar Abdullah) ಹೇಳಿದ್ದಾರೆ.

ಇಂದು ಬೆಳಿಗ್ಗೆ ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಕಾರು ಸ್ಫೋಟವನ್ನು ಖಂಡಿಸಿದ್ದು,  ಯಾವುದೇ ಧರ್ಮವು ಅಮಾಯಕರ ಹತ್ಯೆಯನ್ನು ಇಷ್ಟು ಕ್ರೂರವಾಗಿ ಸಮರ್ಥಿಸಲು ಸಾಧ್ಯವಿಲ್ಲ. ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜಮ್ಮು-ಕಾಶ್ಮೀರದ ಪ್ರತಿಯೊಬ್ಬ ನಿವಾಸಿಯೂ ಭಯೋತ್ಪಾದಕನಲ್ಲ, ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾರೆ.

ಇಲ್ಲಿ ಯಾವಾಗಲೂ ಶಾಂತಿ ಮತ್ತು ಸಹೋದರತ್ವವನ್ನು ಹಾಳು ಮಾಡುತ್ತಿರುವವರು ಕೆಲವೇ ಜನರು. ನಾವು ಜೆ & ಕೆ ಯ ಪ್ರತಿಯೊಬ್ಬ ನಿವಾಸಿ ಮತ್ತು ಪ್ರತಿಯೊಬ್ಬ ಕಾಶ್ಮೀರಿ ಮುಸ್ಲಿಮರನ್ನು ಒಂದೇ ಸಿದ್ಧಾಂತದೊಂದಿಗೆ ನೋಡಿದಾಗ ಅವರನ್ನು ಭಯೋತ್ಪಾದಕ ಎಂದು ಭಾವಿಸಿದಾಗ ಜನರನ್ನು ಸರಿಯಾದ ಹಾದಿಯಲ್ಲಿ ಇಡುವುದು ಕಷ್ಟ ಎಂದಿದ್ದಾರೆ.

ವೈದ್ಯರು ಸೇರಿದಂತೆ ಭಯೋತ್ಪಾದಕ ಶಂಕಿತರ ವೃತ್ತಿಪರ ಹಿನ್ನೆಲೆಯ ಬಗ್ಗೆ ಮಾತನಾಡಿರುವ ಅವರು, ಸ್ಫೋಟದ ಹಿಂದಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು. ಅದರಲ್ಲೇನಾದ್ರೂ ಅಮಾಯಕರು ಇದ್ರೆ ಅವರನ್ನು ಹೊರಗೆ ಇಡಬೇಕು. ಇದಕ್ಕೂ ಮೊದಲು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೋಡಿಲ್ಲವೇ? ವಿದ್ಯಾವಂತರು ಅಂತಹ ವಿಷಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಯಾರು ಹೇಳುತ್ತಾರೆ? ಅವರು ಸಹ ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.

ಡಾ. ಮುಜಮ್ಮಿಲ್, ಡಾ. ಅದೀಲ್ ಮತ್ತು ಮತ್ತೊಬ್ಬ ವೈದ್ಯೆ, ಲಕ್ನೋ ನಿವಾಸಿ ಶಾಹೀನ್ ಸಯೀದ್ ಈಗ ಪೊಲೀಸ್ ವಶದಲ್ಲಿದ್ದಾರೆ. ಸಂಚು ರೂಪಿಸಲಾದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net