ದೆಹಲಿ ಕಾರು ಸ್ಫೋಟ; ಅಲ್​-ಫಲಾಹ್​ ವಿವಿಯ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ| Al-Falah University

ವಿಜಯವಾಣಿ - 2025-11-11T171533.616
Published on

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ 12 ಮಂದಿಯ ಸಾವಿಗೆ ಕಾರಣವಾದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆಗಿನ ಸಂಬಂಧ ಹೊಂದಿರುವ ಅಲ್​-ಫಲಾಹ್ ವಿಶ್ವವಿದ್ಯಾಲಯದ(Al-Falah University) ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯಕ್ಕೆ(ED) ಆದೇಶಿಸಿದೆ ಎಂದು ವರದಿಯಾಗಿದೆ.

ನ. 10ರಂದು ನಡೆಸಿದ ಸ್ಫೋಟದ ಪಿತೂರಿಯನ್ನು ಅದೇ ವಿವಿಯಲ್ಲಿ ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಕೇಂದ್ರವು ಈಗ ಅಲ್ ಫಲಾಹ್ ವಿಶ್ವವಿದ್ಯಾಲಯದ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆಯನ್ನು ಕೋರಿದ್ದು, ಜೊತೆಗೆ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

ಅಲ್- ಫಲಾಹ್ ಸಂಪರ್ಕ

ದೆಹಲಿ-ಹರಿಯಾಣ ಗಡಿಯಿಂದ ಸುಮಾರು 27ಕಿಮೀ ದೂರದಲ್ಲಿರುವ 70 ಎಕರೆಗಳಷ್ಟು ವಿಸ್ತಾರವಾದ ಅಲ್ ಫಲಾಹ್ ವಿಶ್ವವಿದ್ಯಾಲಯ ಒಂದು ಖಾಸಗಿ ಸಂಸ್ಥೆಯಾಗಿದೆ. ಸೋಮವಾರ ಸ್ಫೋಟಗೊಂಡ ಹುಂಡೈ ಐ20 ಚಾಲಕ  ಮೃತ ಡಾ. ಉಮರ್ ಮೊಹಮ್ಮದ್ ವೈದ್ಯನಾಗಿದ್ದನು. ಜೊತೆಗೆ ಡಾ. ಶಾಹೀನ್ ಸಯೀದ್, ಡಾ. ಆದಿಲ್ ರಾಥರ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ವಿಶ್ವವಿದ್ಯಾಲಯದಲ್ಲಿದ್ದರು ಎನ್ನಲಾಗಿದೆ.  ಎಲ್ಲರೂ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ವಿಚಾರಣೆ ನಡೆಯುತ್ತಿದೆ.

ಇನ್ನೂ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳು ಡಾ.ಮುಜಮ್ಮಿಲ್ ಶಕೀಲ್ ಅವರ ಕೊಠಡಿಯಿಂದ ಅಪರಾಧ ಸಾಬೀತಾಗುವ ವಸ್ತುಗಳನ್ನು ಪತ್ತೆ ಹೆಚ್ಚಿದ್ದು, ಅದರಲ್ಲಿ ಇಬ್ಬರು ವೈದ್ಯರ ಡೈರಿಗಳು ಕೋಡೆಡ್ ಸಂದೇಶಗಳನ್ನು ಒಳಗೊಂಡಿವೆ ಮತ್ತಿ ಎಲೆಕ್ಟ್ರಾನಿಕ್ ಸಾಧನಗಳು ಸೇರಿವೆ ಎನ್ನಲಾಗಿದೆ.

ಶಂಕಿತ ಉಗ್ರರು ತಮ್ಮ ಭಯೋತ್ಪಾದಕ ಯೋಜನೆಗಳ ಕುರಿತು ಚರ್ಚಿಸಲು ಡಾ. ಮುಜಮ್ಮಿಲ್ ಅವರ ವಿಶ್ವವಿದ್ಯಾಲಯದ ಕೋಣೆಯಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ. ಬಾಂಬ್ ತಯಾರಿಕೆಯಲ್ಲಿ ಬಳಸಲು ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ಕೆಲವು ರಾಸಾಯನಿಕಗಳನ್ನು ಕಳ್ಳಸಾಗಣೆ ಮಾಡಿದ್ದರು ಎನ್ನಲಾಗಿದೆ.

ಇನ್ನೂ ಆರೋಪಕ್ಕೆ ಸಂಬಂಧಿಸಿದಂತೆ ಅಲ್​-ಫಲಾಹ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಶಂಕಿತರಿಗೂ ತಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಸಹಕರಿಸುವುದಾಗಿ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net