

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಭಾಗವಾಗಿ ನಿರ್ಮಿಸಿರುವ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಾಗುವ ಲೂಪ್ ರಸ್ತೆಯನ್ನು ಸೋಮವಾರ ಮುಖಳ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಹನಸಂಚಾರಕ್ಕೆ ಮುಕ್ತಗೊಳಿಸಿದರು.
ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ಸುಗಮಗೊಳಿಸಲು ಸಮಗ್ರ ಯೋಜನೆ ಅನುಷ್ಠಾನ ಮಾಡಲಾಗಿದೆ. 225 ಕೋಟಿ ರೂ. ವೆಚ್ಚದ ಈ ಯೋಜನೆ 4 ಹಂತವನ್ನು ಒಳಗೊಂಡಿದೆ (ಪರಿಷ್ಕೃತ ಮೊತ್ತ 350 ಕೋಟಿ ರೂ.). ಮೊದಲ ಭಾಗವಾಗಿ ಕೆ.ಆರ್.ಪುರ ಕಡೆಯಿಂದ ನಗರದತ್ತ ಸಂಚರಿಸುವ ವಾಹನಗಳು ಮುಕ್ತ ಎಡತಿರುವು ಪಡೆದು ಮುಂದುವರಿಯುವ ರೀತಿ ಲೂಪ್ ವಿನ್ಯಾಸಗೊಳಿಸಲಾಗಿದೆ. ಈ ಕಾಮಗಾರಿಗೆ 70 ಕೋಟಿ ರೂ. ವೆಚ್ಚವಾಗುತ್ತದೆಂದು ಅಂದಾಜಿಸಲಾಗಿತ್ತು. ಕಾಮಗಾರಿ ವಿಳಂಬದಿಂದ 94 ಕೋಟಿ ರೂ. ಆಗಿತ್ತು. ಲೂಪ್ ನಿರ್ಮಾಣದಿಂದ ದಟ್ಟಣೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
1.5 ಕಿ.ಮೀ. ಸುರಂಗ ರಸ್ತೆ: ಎಸ್ಟೀಮ್ ಮಾಲ್ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ 1.5 ಕಿ.ಮೀ. ಸುರಂಗ ರಸ್ತೆ ನಿರ್ಮಿಸಲಾಗುವುದು. ಇದರ ಸಾಧಕ-ಬಾಧಕ ಹಾಗೂ ಹಣಕಾಸಿನ ನೆರವಿನ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿನಡೆಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಈಗಾಗಲೆ 17 ಸಾವಿರ ಕೋಟಿ ರೂ. ವೆಚ್ಚದಲ್ಲಿ 16.5 ಕಿ.ಮೀ. ಟನಲ್ ರಸ್ತೆಗೆ ಟೆಂಡರ್ ಆಹ್ವಾನಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನ ಮತ್ತೊಂದು ಲೂಪ್ ನಿರ್ಮಾಣವನ್ನು ತ್ವರಿತಗೊಳಿಸಲು ಬಿಡಿಎ ಅಧ್ಯಕ್ಷ ಹ್ಯಾರಿಸ್ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ವಿವರಿಸಿದರು.
ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಬಿಡಿಎ ಆಯುಕ್ತ ಮಣಿವಣ್ಣನ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರರಾವ್, ಮಾಜಿ ಸಂಸದೆ ರಮ್ಯಾ ಹಾಜರಿದ್ದರು.
ಬೈಕ್‌ಪ್ರೇಮಿ ಡಿಕೆಶಿ: ಬೈಕ್ ಪ್ರೇಮಿಯಾದ ಡಿಕೆಶಿ, ಪದವಿ ವ್ಯಾಸಂಗ ಮಾಡುವಾಗ 10,400 ರೂ.ಗೆ ಸಿಎಇ 7684 ಸಂಖ್ಯೆ ಹೊಂದಿದ್ದ ಯೆಡ್ಜಿ ಬೈಕ್ ಖರೀದಿಸಿದ್ದರು. ಕಾಲೇಜು ದಿನಗಳಲ್ಲಿ ಬಳಸಿದ್ದ ಈ ಬೈಕ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನವೀಕರಣ ಮಾಡಿಸಿದ್ದರು. ನೆಚ್ಚಿನ ಬೈಕ್‌ನ್ನು ಹೆಬ್ಬಾಳ ಮೇಲ್ಸೇತುವೆ ಮೇಲೆ ಡಿಕೆಶಿ ಓಡಿಸಿ ಗಮನಸೆಳೆದರು.