

ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುತ್ತಿರುವ ಅಬಕಾರಿ ಇಲಾಖೆಯ ಅಮಾನವೀಯದಿಂದ 8 ಉಪ ಅಧೀಕ್ಷಕರು, 47 ನಿರೀಕ್ಷಕರು ಮತ್ತು 13 ಸಬ್ ಇನ್ಸ್ಪಕ್ಟರ್ ಸೇರಿ 68 ಅಬಕಾರಿ ಅಧಿಕಾರಿಗಳು ಭಯ ಭೀತಿಗೊಂಡಿದ್ದಾರೆ.
ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲರಿಕಲ್ ವೃಂದದ ಅಧಿಕಾರಿಗಳಿಗೆ ಸೇವಾ ಆಧಾರದಲ್ಲಿ ಉಪ ಅಧೀಕ್ಷಕ ಮತ್ತು ನಿರೀಕ್ಷಕ ಹುದ್ದೆಗೆ ಪದೋನ್ನತಿ ಸಿಕ್ಕಿದೆ. ಇವರಲ್ಲರನ್ನೂ ಹಾಗೂ ಸಬ್ಇನ್ಸ್ಪಕ್ಟರ್ ಹುದ್ದೆಗೆ ನೇಮಕವಾಗಿರುವ 13 ಹೊಸ ನೌಕರರನ್ನು ಬೆಂಗಳೂರಿಂದ ದೂರದ ಕಲಬುರಗಿಯ ಪೊಲೀಸ್ ತರಬೇತಿ ಕಾಲೇಜಿಗೆ 6 ತಿಂಗಳು ತರಬೇತಿಗಾಗಿ ಕಳುಹಿಸಲಾಗಿದೆ. ಬಡ್ತಿ ಹೊಂದಿರುವ ಕೆಲವರು 55 ವರ್ಷ ದಾಟಿದ್ದಾರೆ. ಇನ್ನೂ ಕೆಲವರು ನಿವೃತ್ತಿ ಅಂಚಿನಲ್ಲಿದ್ದು, ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರತಿನಿತ್ಯ ಮುಂಜಾನೆಯಿಂದ ಸಂಜೆವರೆಗೆ ಕಠಿಣ ತರಬೇತಿ ನೀಡಲಾಗುತ್ತಿದೆ. ಈ ವೇಳೆ ಅಬಕಾರಿ ನಿರೀಕ್ಷಕ ಮಂಜುನಾಥ್ (45) ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಸಹೋದ್ಯೋಗಿ ನಿಧನದಿಂದ ಹಲವು ಅಧಿಕಾರಿಗಳು ತರಬೇತಿ ಸ್ಥಳದಲ್ಲಿ ಆತಂಕಗೊಂಡಿದ್ದಾರೆ.
ಅಂಗವಿಕಲ ಅಧಿಕಾರಿಗೂ ಕಠಿಣ ತರಬೇತಿ: 68 ಅಧಿಕಾರಿಗಳ ಪೈಕಿ ಇಬ್ಬರಿಗೆ ಗಂಭೀರ ಆರೋಗ್ಯ ಸಮಸ್ಯೆಯಿಂದ ವಿನಾಯಿತಿ ನೀಡಲಾಗಿದೆ. 66 ಅಧಿಕಾರಿಗಳ ಪೈಕಿ ಓರ್ವ ಅಬಕಾರಿ ನಿರೀಕ್ಷಕ ಮೃತಪಟ್ಟಿದ್ದಾರೆ. ಇನ್ನೂ 65 ಅಧಿಕಾರಿಗಳಿದ್ದಾರೆ. ಇದರಲ್ಲಿ ಅಂಗವಿಕಲ ಅಧಿಕಾರಿ ಇದ್ದು, ಅವರಿಗೂ ತರಬೇತಿಯಲ್ಲಿ ಎಲ್ಲರಂತೆ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ಆ ಅಧಿಕಾರಿಯು ದೇಹದಂಡನೆ ಸೇರಿ ಕಠಿಣ ವ್ಯಾಯಾಮ ಮಾಡಬೇಕಿದೆ. ಇಲಾಖೆ ಬೇಜಾಬ್ದಾರಿದಿಂದ ಆ ಅಧಿಕಾರಿಗೆ ದಿಕ್ಕು ತೋಚದಂತಾಗಿದೆ.
ಮಿಲಿಟರಿ ತರಬೇತಿ ಮೀರಿಸುತ್ತೆ ಅಬಕಾರಿ ತರಬೇತಿ: ಇಲಾಖೆ ನಿಯಮದಂತೆ ಖಾಕಿ ಯೂನಿಫಾರಂ ಧರಿಸುವವರು ಕೇಸ್ ದಾಖಲು, ಅಕ್ರಮ ಮದ್ಯ ತಡೆ, ಕೋರ್ಟ್ಗೆ ಅಪರಾಧಿ ಹಾಜರು, ಅಕ್ರಮ ಮದ್ಯ ಮಾರಾಟ ಮೇಲೆ ದಾಳಿ ಸೇರಿ ಇತರೆ ಅಬಕಾರಿ ಕಾರ್ಯನಿರ್ವಹಣೆ ಬಗ್ಗೆ 6 ತಿಂಗಳು ತರಬೇತಿ ಪಡೆಯುವುದು ಕಡ್ಡಾಯ. ಹೊಸದಾಗಿ ನೇಮಕವಾಗುವ ನೌಕರರಿಗೆ ಪೊಲೀಸ್ ಮಾದರಿಯಲ್ಲಿ ತರಬೇತಿ ನೀಡುವುದು ಸರಿ ಇದೆ. ಆದರೆ, ಇಲಾಖೆಯ ಕ್ಲರಿಕಲ್ ಹುದ್ದೆಯಲ್ಲಿ 20 ವರ್ಷ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ಸೇವಾ ಆಧಾರದಲ್ಲಿ ಬಡ್ತಿ ಸಿಕ್ಕಿದೆ. ಅವೆರಲ್ಲರೂ 45 ವರ್ಷ ದಾಟಿದ್ದಾರೆ. 6 ತಿಂಗಳು ಬದಲಾಗಿ 3 ತಿಂಗಳು ತರಬೇತಿ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದರು. ಆದರೆ, ಇಲಾಖೆ ಆಯುಕ್ತರು ವಿನಾಯಿತಿ ನೀಡಲಿಲ್ಲ. ಇದೀಗ ಎಲ್ಲರಿಗೂ ಮಿಲಿಟರಿ ಮಾದರಿ ತರಬೇತಿ ನೀಡಲಾಗುತ್ತಿದೆ. ಅನಾರೋಗ್ಯ ಪೀಡಿತ ಹಾಗೂ ನಿರಂತರ ವೈದ್ಯಕೀಯ ನಿಗಾ ಬೇಕಾದವರ ನೌಕರರ, ವೈದ್ಯಕೀಯ ಸರ್ಟಿಫಿಕೇಟ್ ನೀಡಿದವರ ಮನವಿಯನ್ನು ಇಲಾಖೆ ಪರಿಗಣಿಸುತ್ತಿಲ್ಲ.
ಇಲಾಖೆಗೆ ಇನ್ನಷ್ಟು ಪ್ರಾಣ ಬೇಕು:ಕಠಿಣ ತರಬೇತಿಯಲ್ಲಿ ಈಗಾಗಲೇ ಓರ್ವ ಅಧಿಕಾರಿ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಆರೋಗ್ಯ ಸಮಸ್ಯೆ ಇರುವವರಿಗೂ ಇಲಾಖೆ ಸಲ್ಪವೂ ರಿಯಾಯಿತಿ ತೋರುತ್ತಿಲ್ಲ. ತರಬೇತಿಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಅವರ ಕುಟುಂಬದಿಂದ ತರ್ತು ಕರೆ ಬಂದರೂ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಇಲಾಖೆ ಧೋರಣೆಯಿಂದ ಹಲವರ ಪ್ರಾಣಕ್ಕೆ ತೊಂದರೆ ಎದುರಾಗಿದೆ.ಈ ಬಗ್ಗೆ ಇಲಾಖೆ ಆಯುಕ್ತರೇ ಉತ್ತರ ನೀಡಬೇಕಿದೆ.