

ಬೆಂಗಳೂರು: ಈಗಿರುವ ಠಾಣೆಗಳ ಸರಹದ್ದಿಗೆ ಇನ್ನೊಂದಷ್ಟು ಪ್ರದೇಶ ಸೇರ್ಪಡೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಇರುವವರ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ. ವಾರದ ರಜೆಯೂ ಸಿಗುತ್ತಿಲ್ಲ ಎಂಬ ದೂರು ಪೊಲೀಸ್ ವಲಯದಲ್ಲಿ ಮೊದಲಿನಿಂದಲೂ ಇದೆ. ಇದಕ್ಕೆ ತಾಜಾ ಉದಾಹರಣೆ, ಜೀವನ್ಬಿಮಾನಗರ ಸಂಚಾರ ಪೊಲೀಸ್ ಠಾಣೆ. ಇದರ ಸರಹದ್ದಿಗೆ ಇಂದಿರಾನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗವನ್ನೂ ಸೇರಿಸಿರುವುದರಿಂದ ಸಿಬ್ಬಂದಿಗೆ ಸಮಸ್ಯೆಯಾಗಿದೆ. ಪೂರ್ವ ವಿಭಾಗದಲ್ಲಿ ಹೊಸ ಸಂಚಾರ ಪೊಲೀಸ್ ಠಾಣೆ ಬೇಕೆಂದು ಸ್ಥಳೀಯರಲ್ಲಿ ಕೂಗು ಕೇಳಿಬಂದಿದೆ.
ಬೈಯಪ್ಪನಹಳ್ಳಿ, ಇಂದಿರಾನಗರ ಸಿವಿಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಜೀವನ್ಬೀಮಾನಗರ ಸಂಚಾರ ಠಾಣೆ ಸ್ಥಾಪಿಸಲಾಗಿದೆ. ಅಂದರೆ ಮೂರು ಠಾಣೆಗಳಿಗೆ ಒಂದೇ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಕಳೆದ ಜನವರಿಯಲ್ಲಿ
ಇಂದಿರಾನಗರ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ವ್ಯಾಪ್ತಿಗೆ ಒಳಗೊಂಡಿರುವ ಎಲ್ಲ ಪ್ರದೇಶವನ್ನು ಹಲಸೂರು ಸಂಚಾರ ಠಾಣೆಯಿಂದ ಬೇರ್ಪಡಿಸಿ ಜೀವನ್ಬಿಮಾನಗರ ಸಂಚಾರ ಠಾಣೆಗೆ ವಹಿಸಲಾಗಿದೆ. ಇದರಿಂದ ಪೀಕ್ ಅವರ್ನಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಪೊಲೀಸರ ಅಸಮಾಧಾನವೇನು?: ಹಲಸೂರು ಸಂಚಾರ ಠಾಣೆಯಲ್ಲಿ 117 ಅಧಿಕಾರಿ, ಸಿಬ್ಬಂದಿ ಹಾಗೂ ಹಲಸೂರು ಸಿವಿಲ್ ಠಾಣೆಯಲ್ಲಿ 100 ಅಧಿಕಾರಿ, ಸಿಬ್ಬಂದಿ ಇದ್ದಾರೆ. ಒಂದು ಕಾನೂನು ಸುವ್ಯವಸ್ಥೆ ಠಾಣೆ, ಒಂದು ಸಂಚಾರ ಠಾಣೆ ಇದೆ. ಆದರೆ ಜೀವನ್ಬೀಮಾನಗರ ಸಂಚಾರ ಠಾಣೆ ವ್ಯಾಪ್ತಿಗೆ ಮಾತ್ರ ಮೂರು ಸಿವಿಲ್ ಠಾಣೆ ವ್ಯಾಪ್ತಿಯ ಜವಾಬ್ದಾರಿ ನೀಡಲಾಗಿದೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿವಿಲ್ ಪೊಲೀಸರ ನಿಯೋಜನೆ: ಸಂಚಾರದಟ್ಟಣೆ ಹೆಚ್ಚಿರುವ ಮತ್ತು ಪೊಲೀಸ್ ಸಿಬ್ಬಂದಿ ಅಗತ್ಯ ಇರುವ ಕಡೆಗಳಲ್ಲಿ ಸಿವಿಲ್ ಪೊಲೀಸರನ್ನು ಸಹ ಪೀಕ್ ಅವರ್ನಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಅಲ್ಲದೆ, ನಗರಕ್ಕೆ ಹೊಸದಾಗಿ ಸಂಚಾರ ಠಾಣೆ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಕೆಲವೊಂದು ಪೊಲೀಸ್ ಠಾಣೆಗಳ ಗಡಿಭಾಗಗಳನ್ನು ಮರುವಿಂಗಡಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.