

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪ್ರವೇಶಿಸುವ ಮೂನ್ಸೂಚನೆ ಸಿಕ್ಕಿದ ಬೆನ್ನಲ್ಲೇ ಭಾನುವಾರದಿಂದ (ಜೂ 2) ಮಳೆ ಚುರುಕು ಪಡೆಯುವ ಸಾಧ್ಯತೆ ಇದೆ.
ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಮೈಸೂರಿನಲ್ಲಿ ಜೂ 2ರಿಂದ ಮುಂದಿನ ಎರಡು ದಿನ, ರಾಮನಗರ, ಚಾಮರಾಜನಗರದಲ್ಲಿ ಜೂ 2ರಂದು ಹಾಗೂ ಹಾಸನದಲ್ಲಿ ಜೂ 3ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ವಿಜಯಪುರದಲ್ಲಿ ಮುಂದಿನ ಐದು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮಾನ್ಸೂನ್ ತುಸು ದುರ್ಬಲ
ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಿದ್ದ ನೈಋತ್ಯ ಮಾನ್ಸೂನ್ ಶುಕ್ರವಾರ ತುಸು ದುರ್ಬಲವಾಗಿದೆ. ಮಾರುತಗಳು ಪ್ರಬಲವಾಗಿದ್ದರೆ ಕೇರಳಕ್ಕೆ ಪ್ರವೇಶಿಸಿದ್ದ ದಿನವೇ ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಬೇಕಿತ್ತು. ಆದರೆ, ಮಾರುತಗಳು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಒಂದರೆಡು ದಿನದಲ್ಲಿ ರಾಜ್ಯಕ್ಕೆ ಪ್ರವೇಶಿಸಲಿದೆ. ನಂತರ,ಜೂ 8ರವೇಳೆಗೆ ರಾಜ್ಯಾದ್ಯಂತ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ಹೇಳಿದ್ದಾರೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮತ್ತೆ ತಾಪಮಾನ ಹೆಚ್ಚಳವಾಗುತ್ತಿದೆ. ಬೀದರ್, ರಾಯಚೂರು, ವಿಜಯಪುರ, ಕಲಬುರಗಿಯಲ್ಲಿ ಉಷ್ಣಾಂಶ 40ರ ಗಡಿ ದಾಟಿದೆ. ಮಾನ್ಸೂನ್ ವ್ಯಾಪಿಸಿದ ಬಳಿಕ ತಾಪಮಾನ ಇಳಿಮುಖವಾಗಲಿದೆ ಎಂದರು.