ಸರ್ಕಾರದ ನಿಯಮ ಉಲ್ಲಂಘಿಸಿ ಬಿಬಿಎಂಪಿಗೆ ಮೂವರು ನಿವೃತ್ತಿ ಅಧಿಕಾರಿಗಳ ನೇಮಕ

BBMP
Published on

ಬೆಂಗಳೂರು:ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಬಿಬಿಎಂಪಿಯಲ್ಲಿ ಮೂವರು ನಿವೃತ್ತ ಅಧಿಕಾರಿಗಳನ್ನು ನೇಮಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪಾಲಿಕೆಯ ಶಿಕ್ಷಣ ಇಲಾಖೆಯಲ್ಲಿ ಹಿರಿಯ ಶೈಕ್ಷಣಿಕ ಸಲಹೆಗಾರರ ಹುದ್ದೆಗೆ ಒಬ್ಬರನ್ನು, ಶೈಕ್ಷಣಿಕ ಸಲಹೆಗಾರರ ಹುದ್ದೆಗೆ ಇಬ್ಬರನ್ನು ಸೇರಿ ಒಟ್ಟು ಮೂವರನ್ನು ಮುಂದಿನ 11 ತಿಂಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಎನ್​.ಕೆಂಚೇಗೌಡ, ರಾಮಾಂಜನೇಯ ಹಾಗೂ ನಿವೃತ್ತ ಹಿರಿಯ ಉಪನ್ಯಾಸಕ ಓಬಳೇಶಪ್ಪ ಅವರನ್ನು 2024ರ ಮೇ 23ರಿಂದ 2025ರ ಏ.22ರವರೆಗೆ ಪಾಲಿಕೆಯ ಶಿಕ್ಷಣ ಇಲಾಖೆಯಲ್ಲಿ ಹಿರಿಯ ಶೈಕ್ಷಣಿಕ ಸಲಹೆಗಾರರ ಹಾಗೂ ಶೈಕ್ಷಣಿಕ ಸಲಹೆಗಾರರ ಹುದ್ದೆಗೆ ನೇಮಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ಶಾಲಾ-ಕಾಲೇಜುಗಳ ನಿರ್ವಹಣೆಯನ್ನು ಬಿಬಿಎಂಪಿ ಮಾಡುತ್ತಿದೆ. ಶೈಕ್ಷಣಿಕ ಅಭಿವೃದ್ಧಿ, ಫಲಿತಾಂಶ ಹೆಚ್ಚಿಸುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಒಬ್ಬ ಹಿರಿಯ ಶೈಕ್ಷಣಿಕ ಸಲಹೆಗಾರ ಹಾಗೂ ಶೈಕ್ಷಣಿಕ ಸಲಹೆಗಾರ ಹುದ್ದೆಗೆ 2023ರ ಜೂ 22ರಿಂದ 2024ರ ಮೇ 5ರವರೆಗೆ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿತ್ತು. ಇವರ ಒಡಂಬಡಿಕೆಯನ್ನು ಮುಂದಿನ ಶೈಕ್ಷಣಿಕ ಸಾಲಿನವರೆಗೆ ಮುಂದುವರಿಸಲು ಪಾಲಿಕೆ ಮುಖ್ಯ ಆಯುಕ್ತರು ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಮತ್ತೆ ನೇಮಿಸಿಕೊಳ್ಳಲಾಗಿದೆ ಎಂದು ಪಾಲಿಕೆಯ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಆದೇಶ ಹೊರಡಿಸಿದ್ದ ಸರ್ಕಾರ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸೇರಿ ಸರ್ಕಾರ ಹಲವು ಇಲಾಖೆಗಳಲ್ಲಿ ಹಾಗೂ ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಅನಗತ್ಯ ಹುದ್ದೆಗಳನ್ನು ಸೃಜಿಸಿ ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿ, ಗ್ರೂಪ್​ "ಎ', "ಬಿ'ವೃಂದದ ಲಾಭದಾಯಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಇವರಿಗೆ ವೇತನ, ವಾಹನ ಸೇರಿ ಇತರೆ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ನೂರಾರು ಕೋಟಿ ರೂ.ಹೊರೆಯಾಗುತ್ತಿದೆ. ಕಾರ್ಯಕ್ಷಮತೆ ಗುಣಮಟ್ಟ, ಉತ್ತರದಾಯಿತ್ವ ಕೊರತೆ ಇವರಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಗಳು, ನೌಕರರನ್ನು ಕೂಡಲೆ ಹುದ್ದೆಗಳಿಂದ ಬಿಡುಗಡೆಗೊಳಿಸಿ ಆ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಜ.23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಹೊರಬಂದ ಬಳಿಕ ಕೆಲವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದರೆ, ಇನ್ನೂ ಹಲವು ನಿವೃತ್ತಿ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಹುದ್ದೆಯಲ್ಲಿ ಕುಳಿತು ಕಾರ್ಯಭಾರ ನಡೆಸುತ್ತಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net