

ಬೆಂಗಳೂರು: ರಾಜ್ಯದ ಹಲವೆಡೆ ಈಗಾಗಲೇ ಮಳೆ ಕ್ಷೀಣಗೊಂಡಿರುವ ನಡುವೆಯೂ ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ 2-3 ದಿನ ವರುಣಾರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿಯಲ್ಲಿ ಮುಂದಿನ 2 ದಿನ ಮತ್ತು ಕೊಪ್ಪಳ, ರಾಯಚೂರಿನಲ್ಲಿ ಸೆ.16ರಿಂದ ಸೆ.18 ರವರೆಗೆ ಬಿರುಸಾಗಿ ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಯಾದಗಿರಿಯಲ್ಲಿ ಸೆ.17ರಿಂದ ಮುಂದಿನ 2 ದಿನ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಕೊಡಗು, ಚಿತ್ರದುರ್ಗ, ಗದಗದಲ್ಲಿ ಸೆ.18ರಂದು ಯೆಲ್ಲೋ ಅಲರ್ಟ್ ಇರಲಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ವಿಜಯನಗರ, ಬಳ್ಳಾರಿ, ದಾವಣಗೆರೆಯಲ್ಲಿ ಮುಂದಿನ 5 ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
21 ಜಿಲ್ಲೆಗಳಲ್ಲಿ ಮಳೆ ಕೊರತೆ: ಪ್ರಸಕ್ತ ತಿಂಗಳಲ್ಲಿ 21 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಸೆ.1ರಿಂದ ಸೆ.15ರವರೆಗೆ ರಾಜ್ಯಾದ್ಯಂತ ಶೇ.21 ಮಳೆ ಕುಂಠಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ.45, ಮಲೆನಾಡಿನಲ್ಲಿ ಶೇ.18 ಹಾಗೂ ಕರಾವಳಿಯಲ್ಲಿ ಶೇ.25 ಮಳೆ ಅಭಾವ ಉಂಟಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದ್ದರೂ 7 ಜಿಲ್ಲೆಗಳಿಗೆ ತೀವ್ರ ಮಳೆ ಕೊರತೆ ಕಾಡಿದೆ.