

ಬೆಂಗಳೂರು: ರಾಜ್ಯದಲ್ಲೆಡೆ ಕ್ಷೀಣವಾಗಿದ್ದ ಮಳೆ,ದಕ್ಷಿಣ ಕರ್ನಾಟಕದ ಹಲವೆಡೆ ಸೋಮವಾರದಿಂದ ಬಿರುಸುಗೊಳ್ಳಲಿದೆ. ಚಾಮರಾಜನಗರ, ರಾಮನಗರದಲ್ಲಿ ಮುಂದಿನ 5 ದಿನ, ಬೆಂಗಳೂರು. ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಆ.14ರಿಂದ ಮುಂದಿನ ಮೂರು ದಿನ ಭಾರಿ ಮಳೆ ಬೀಳುವ ಸಂಭವ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಕೊಟ್ಟಿದೆ.
ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಆ.12ರಿಂದ ಮುಂದಿನ ಐದು ದಿನ, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೀದರ್, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಆ.15ರಿಂದ ಆ.18ರವರೆಗೆ ಗುಡುಗು ಮಿಂಚು ಸಹಿತ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಸದ್ಯದ ಹವಾಮಾನ ಸ್ಥಿತಿ ಗಮನಿಸಿದರೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆ ಇಳಿಮುಖವಾಗಿದೆ. ಮುಂದಿನ ಮೂರು ದಿನ ಕಡಿಮೆಯಾಗಿರುವ ಮಳೆ, ಆ.15ರಿಂದ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುವ ಸಾಧ್ಯತೆ ಇದೆ ಎಂದು ಹೇಳಿದರು.