23ರಿಂದ ಮಲೆನಾಡು,ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ:ರೆಡ್​​ ಅಲರ್ಟ್ ಘೋಷಣೆ

rain fall
Published on

ಬೆಂಗಳೂರು:ನಾಲ್ಕೈದು ದಿನಗಳಿಂದ ದುರ್ಬಲವಾಗಿದ್ದ ಮುಂಗಾರು ಗುರುವಾರದಿಂದ ಚುರುಕಾಗಿರುವ ಕಾರಣ ರಾಜ್ಯದಲ್ಲೆಡೆ ಮಳೆ ಅಬ್ಬರಿಸುತ್ತಿದೆ.

ಚಿಕ್ಕಮಗಳೂರಿನ ಮೂಡಗೆರೆ, ಕೊಡಗಿನ ಗೋಣಿಕೊಪ್ಪ, ಶಿವಮೊಗ್ಗದ ಆಗುಂಬೆ, ದಕ್ಷಿಣ ಕನ್ನಡದ ಮಂಗಳೂರು ಮತ್ತು ಬೆಂಗಳೂರು ಸೇರಿ ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 23ರಿಂದ ಮುಂದಿನ ಎರಡು ದಿನ ಹಾಗೂ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರಿನಲ್ಲಿ ಜೂ 24 ಅತಿ ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ರೆಡ್​ ಅಲರ್ಟ್​ ನೀಡಲಾಗಿದೆ. ಈ ಸಂದರ್ಭದಲ್ಲಿ ಒಂದೇ ದಿನದಲ್ಲಿ 204 ಮಿಮೀವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಸನದಲ್ಲಿ ಜೂ 23ರಿಂದ ಮುಂದಿನ ಎರಡು ದಿನ, ಚಾಮರಾಜನಗರ, ದಾವಣಗೆರೆ ಜೂ 24ರಂದು, ಬೆಳಗಾವಿ, ಧಾರವಾಡ ಹಾಗೂ ಹಾವೇರಿಯಲ್ಲಿ ಜೂ 24, ಜೂ 25ರಂದು ಆರೆಂಜ್​ ಅಲರ್ಟ್ ನೀಡಲಾಗಿದೆ.

ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಜೂ 23ರಿಂದ ಈ ಎರಡು ಭಾಗದಲ್ಲಿ ಮುಂಗಾರು ಚುರುಕಾಗಲಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net