

ಉಳ್ಳಾಲ: ರೋಗ ಮುಕ್ತ ಆರೋಗ್ಯವಂತ ಆಯುಷ್ ಗ್ರಾಮ ನಿರ್ಮಾಣಕ್ಕೆ ನಿರಂತರ ಆರೋಗ್ಯ ಶಿಬಿರಗಳು ಅಗತ್ಯ ಎಂದು ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ತಿಳಿಸಿದರು.
ತಲಪಾಡಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ, ಮುಡಿಪು ಜನ ಶಿಕ್ಷಣ ಟ್ರಸ್ಟ್ ಮತ್ತು ಪಜೀರ್ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪಜೀರ್ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ವಿಶೇಷಚೇತನರು, ಅವರ ಕುಟಂಬ ಸದಸ್ಯರು ಹಾಗೂ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಡಾ.ಸಪ್ನಾ ದಿನೇಶ್ ಭಂಡಾರಿ ಆಯುರ್ವೇದ ಔಷಧಿ ಪದ್ಧತಿ ಕುರಿತು ಮಾಹಿತಿ ನೀಡಿದರು. ಪಿಡಿಒ ಶ್ರೀಕಾಂತ್, ಆಯುರ್ವೇದ ಆರೋಗ್ಯ ಶಿಬಿರಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಿರಂತರ ಸಹಕಾರ ನೀಡುವುದಾಗಿ ತಿಳಿಸಿದರು.
ಡಾ.ಶಾಮ್ ಪ್ರಕಾಶ್ ಸಹಿತ ವೈದ್ಯರ ತಂಡ ಔಷಧಿ ವಿಭಾಗದ ಆಶಾ, ರಿಶಿಕಾ ಅವರು 77 ಮಂದಿಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಕಾರ್ಯದರ್ಶಿ ನಾಗೇಶ್ ದೇವಾಡಿಗ, ಸಿಬ್ಬಂದಿ ಉಷಾ, ವಿನೋದ್, ವಿಜಯಶ್ರೀ, ಪುನರ್ವಸತಿ ಕಾರ್ಯಕರ್ತೆ ಸುಧಾಮಣಿ, ಹರ್ಷ ಸಹಕರಿಸಿದರು.