

ಚಿಕ್ಕಬಳ್ಳಾಪುರ: ಅಮ್ಮನಿಗೆ ಸೌಖ್ಯವಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದು, ಶಸ್ತ್ರಚಿಕಿತ್ಸೆ ನಡೆದಿತ್ತು. ಅಪ್ಪನೂ ಅವರ ಜತೆಯಲ್ಲೇ ಆಸ್ಪತ್ರೆಯಲ್ಲಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮಗ, ಅಪ್ಪ-ಅಮ್ಮನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದ. ಒಂದು ರಾತ್ರಿ ಕಳೆದರೆ ಬೆಳಗ್ಗೆ ಡಿಸ್ಚಾರ್ಜ್ ಆಗಿ ಮನೆಗೆ ಬರಲಿದ್ದ ಅಪ್ಪ-ಅಮ್ಮನನ್ನು ನೋಡುತ್ತಿದ್ದ. ಆದರೆ ಅಪ್ಪ-ಅಮ್ಮ ಬೆಳಗ್ಗೆ ಮಗನನ್ನು ಶವವಾಗಿ ಕಾಣಬೇಕಾಯಿತು!
ವೆಲ್ಡಿಂಗ್ ಕೆಲಸ ಮಾಡುತ್ತಿದ್ದವನನ್ನು ಯಾರೋ ಕೊಚ್ಚಿ ಕೊಲೆ ಮಾಡಿದ್ದು, ಮನೆ ಹತ್ತಿರದ ತೋಟದಲ್ಲಿ ಹೆಣವಾಗಿ ಬಿದ್ದಿದ್ದ. ಯಾಕೆ ಯಾರು ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ಟಿಪ್ಪುನಗರದ ನಿವಾಸಿ ಇಮ್ರಾನ್ ಖಾನ್ (25) ಕೊಲೆಯಾದವ. ಈತ ನಗರದ ಕೆಎಸ್ಆರ್ಟಿಸಿ ಡಿಪೋ ಬಳಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.
ತಾಯಿಯನ್ನು ಹಿಂದೂಪುರದ ಆಸ್ಪತ್ರೆಗೆ ಸೇರಿಸಲಾಗಿದ್ದು, ರಾತ್ರಿ 10 ಗಂಟೆಗೆ ಮನೆಗೆ ಬಂದವನೇ ಕರೆ ಮಾಡಿ ಮಾತನಾಡಿದ್ದ. ಅಮ್ಮನನ್ನು ಬೆಳಗ್ಗೆ ಡಿಸ್ಚಾರ್ಜ್ ಮಾಡುತ್ತಾರೆ ಎಂದು ತಂದೆ ಆಗ ಹೇಳಿದ್ದರು. ಆದರೆ ಇಂದು ಬೆಳಗ್ಗೆ ಮನೆಯಿಂದ 500 ಮೀಟರ್ ದೂರದಲ್ಲಿ ಬೈಪಾರ್ ರಸ್ತೆ ಪಕ್ಕದ ತೋಟದಲ್ಲಿ ಇಮ್ರಾನ್ ಶವ ಪತ್ತೆಯಾಗಿತ್ತು. ಹುಲ್ಲಿನ ಕಟಾವಿಗೆ ತೋಟಕ್ಕೆ ಬಂದಿದ್ದ ಮಾಲೀಕರು ಅದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಸ್ಪತ್ರೆಯಲ್ಲಿದ್ದ ಇಮ್ರಾನ್ ತಂದೆ ಷರೀಫ್ಗೆ ಕರೆ ಮಾಡಿ ವಿಷಯ ತಿಳಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಬಂದ ಗೌರಿಬಿದನೂರು ಪೊಲೀಸರು, ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೇ ದ್ವೇಷದಿಂದಾಗಿ ಕೊಲೆ ಮಾಡಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೂರ್ನಾಲ್ಕು ಆಯಾಮಗಳಿಂದ ತನಿಖೆ ನಡೆಸಲಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)