

ಬೆಂಗಳೂರು: ವರ್ಷಾಂತ್ಯದ ಕೊನೆಯಲ್ಲಿ ಕುಡಿದು ಏನೇನೋ ಸಮಸ್ಯೆ ಎದುರು ಹಾಕಿಕೊಳ್ಳುವವರಿಗೆ ಇದೊಂದು ಎಚ್ಚರಿಕೆಯ ಘಟನೆ ಎಂದರೂ ತಪ್ಪೇನಲ್ಲ. ಸ್ನೇಹಿತರಿಬ್ಬರು ಖುಷಿಗೆಂದು ಮದ್ಯ ಸೇವಿಸಿ ಮಾತಿಗಿಳಿದು ಕೊನೆಗೆ ಒಬ್ಬ ಜೀವ ಕಳೆದುಕೊಂಡರೆ ಮತ್ತೊಬ್ಬ ಪಶ್ಚಾತ್ತಾಪ ಪಡುವಂತಾಗಿದೆ.
ಮೂರು ತಿಂಗಳಿಂದ ಗುಜರಿ ಅಂಗಡಿಯಲ್ಲಿ ಇರ್ಫಾನ್ ಮತ್ತು ನವೀನ್ ಕೆಲಸ ಮಾಡುತ್ತಿದ್ದು, ಪಟ್ಟೇಗಾರಪಾಳ್ಯದಲ್ಲಿ ನೆಲೆಸಿದ್ದರು. ಮನೆಯಲ್ಲಿ ಸೋಮವಾರ ರಾತ್ರಿ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದಾಗ ಹಣದ ವಿಷಯ ಪ್ರಸ್ತಾಪವಾಗಿ ಜಗಳ ಶುರುವಾಗಿದೆ. ಬರೀ ಐದು ಸಾವಿರ ರೂಪಾಯಿ ವಿಚಾರವಾಗಿ ಆರಂಭವಾದ ಜಗಳ ಬಳಿಕ ಒಬ್ಬನ ಕೊಲೆಯಲ್ಲಿ ಅಂತ್ಯ ಕಂಡಿದೆ. ವಿಜಯನಗರದ ಪಟ್ಟೇಗಾರಪಾಳ್ಯದ ಇರ್ಫಾನ್ (24) ಕೊಲೆಯಾದ ವ್ಯಕ್ತಿ. ಈ ಘಟನೆ ಸಂಬಂಧ ಆತನ ಗೆಳೆಯ ನವೀನ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮದ್ಯದ ಮತ್ತಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಹಣದ ವಿಷಯವಾಗಿ ಕೆರಳಿದ ನವೀನ್, ಇರ್ಫಾನ್‌ಗೆ ಚಾಕುವಿನಿಂದ ಇರಿದಿದ್ದಾನೆ. ಚೀರಾಟ ಕೇಳಿ ಇರ್ಫಾನ್ ಮನೆಗೆ ಸ್ಥಳೀಯರು ಬಂದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಕೃತ್ಯ ಎಸಗಿದ ಬಳಿಕ ನವೀನ್ ಪರಾರಿಯಾಗಿದ್ದ. ಘಟನೆ ಕುರಿತು ಮಾಹಿತಿ ತಿಳಿದು ಆರೋಪಿ ಬಂಧನಕ್ಕೆ ಬಲೆಬೀಸಿದಾಗ ವಿಜಯನಗರ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.