ಚನ್ನಪಟ್ಟಣ ಉಪಚುನಾವಣೆಯಲ್ಲಿ ಪುತ್ರ ನಿಖಿಲ್​ ಸೋಲು: ಎಚ್​ಡಿ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ಹೀಗಿದೆ... HD Kumaraswamy

HD Kumaraswamy
Published on

HD Kumaraswamy : ಇಡೀ ರಾಜ್ಯದ ಗಮನ ಸೆಳೆದಿದ್ದ ಬೊಂಬೆಯ ನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್​ ಕುಮಾರಸ್ವಾಮಿ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್​ ವಿರುದ್ಧ ಸೋಲು ಅನುಭವಿಸಿದ್ದಾರೆ. ಈ ಬಗ್ಗೆ ನಿಖಿಲ್​ ತಂದೆ, ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು (ನ.24) ಮಾಧ್ಯಮದವರೊಂದಿಗೆ ಮಾತನಾಡಿದ ಎಚ್​ಡಿಕೆ, ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಫಲಿತಾಂಶವನ್ನು ಒಪ್ಪಿಕೊಳ್ಳಲೇಬೇಕಿದೆ. ಈ ಬಗ್ಗೆ ಈಗ ಚರ್ಚಿಸಿದರೆ ಯವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಅಂದಹಾಗೆ ನಿಖಿಲ್​ ಅವರಿಗೆ ಇದು ಮೂರನೇ ಸೋಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ವಿರುದ್ಧ ಮೊದಲ ಬಾರಿಗೆ ಸೋಲುಂಡ ನಿಖಿಲ್​, 2023ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಎರಡನೇ ಬಾರಿ ಸೋತರು. ಇದೀಗ ಉಪಚುನಾವಣೆಯಲ್ಲಿ ಮತ್ತೆ ಸೋಲಿನ ಕಹಿ ಉಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿದ್ದ ಸಿ.ಪಿ ಯೋಗೇಶ್ವರ್​, 1,12,388 ಮತಗಳನ್ನು ಸ್ವೀಕರಿಸಿದ್ದರೆ, ನಿಖಿಲ್ 87,031 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಸಿಪಿವೈ 25,357 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಚುನಾವಣಾ ಫಲಿತಾಂಶದ ಬಳಿಕ ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್​, ಚನ್ನಪಟ್ಟಣ ಕ್ಷೇತ್ರದ ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ. ಇದು ಬಯಸದೇ ಬಂದ ಉಪಚುನಾವಣೆ, 87 ಸಾವಿರ ಮತ ನೀಡಿದ ಚನ್ನಪಟ್ಟಣ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಜೆಡಿಎಸ್​, ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಎಲ್ಲಿ ಎಡವಿದ್ದೇವೆ ಅಂತ ಚರ್ಚೆ ಮಾಡುತ್ತೇವೆ. ಈ ಸೋಲನ್ನು ನಾನೇ ಸ್ವೀಕಾರ ಮಾಡ್ತೇನೆ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇವೆ. ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನಾನು ಭರವಸೆ ಕೊಟ್ಟಿದ್ದೆ. ಆ ಭರವಸೆ ಕೇವಲ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ. ನಾನು ಕೊಟ್ಟ ಮಾತನ್ನು ಹಿಂಪಡೆಯಲ್ಲ ಎಂದು ವಾಗ್ದಾನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net