

ಹಾವೇರಿ: ಲಾಕ್ಡೌನ್ 3ರ ಅವಧಿಯಲ್ಲಿ ಮದ್ಯಮಾರಾಟಕ್ಕೆ ಕೊಂಚ ವಿನಾಯಿತಿ ಸಿಕ್ಕಿದ ಕಾರಣ ಹಾವೇರಿ ಜಿಲ್ಲೆಯಾದ್ಯಂತ ಮದ್ಯದಂಗಡಿಗಳು ಸೋಮವಾರ ಬೆಳಗ್ಗೆಯೇ ಓಪನ್ ಆಗಿವೆ. ಲಾಕ್ಡೌನ್ ಎರಡು ಅವಧಿಯಲ್ಲೂ ಮದ್ಯ ಮಾರಾಟ ಇಲ್ಲದ ಕಾರಣ, ಭ್ರಮನಿರಸನಕ್ಕೆ ಒಳಗಾಗಿದ್ದ ಮದ್ಯಪ್ರಿಯರು ಕೊಂಚ ರಿಲ್ಯಾಕ್ಸ್ ಮೂಡ್ನಲ್ಲಿದ್ದುದು ಕಂಡುಬಂತು.
ಬೆಳಗ್ಗೆಯೇ ಮದ್ಯದಂಗಡಿಗಳ ಎದುರು ಜಮಾಯಿಸಿದ ಮದ್ಯಪ್ರಿಯರು, ಮದ್ಯ ಖರೀದಿಗಾಗಿ ಸುಮಾರು ಅರ್ಧ ಕಿ.ಮೀ. ಉದ್ದಕ್ಕೆ ಸರದಿ ನಿಂತಿದ್ದರು. ಜಿಲ್ಲೆಯಲ್ಲಿ 80 CL2, 24 ಎಂಎಸ್ ಐಎಲ್ ಅಂಗಡಿಗಳು ವ್ಯಾಪಾರ ಶುರುಮಾಡಿಕೊಂಡಿವೆ. ಜಿಲ್ಲಾಡಳಿತದ ಆದೇಶ ಪ್ರಕಾರ, ಒಬ್ಬ ವ್ಯಕ್ತಿಗೆ 2.3 (ಎರಡು ಲೀಟರ್ ಮೂವತ್ತು ಎಂಎಲ್) ಮದ್ಯವನ್ನಷ್ಟೇ ಮದ್ಯದಂಗಡಿಗಳು ವಿತರಣೆ ಮಾಡುತ್ತಿವೆ.
ಮದ್ಯದಂಗಡಿ ಮಾರಾಟ ಮತ್ತು ನಿಯಮ ಪಾಲನೆ ಪರಿಶೀಲನೆ ಮಾಡುವ ಸಲುವಾಗಿ ಅಬಕಾರಿ ಡಿಸಿ ಡಾ.ಮಹಾದೇವಿಬಾಯಿ ಜಿಲ್ಲಾದ್ಯಂತ ಗಸ್ತು ನಡೆಸುತ್ತಿದ್ದಾರೆ. ನಿಯಮ ಉಲ್ಲಂಘನೆಯಾದರೆ ಮದ್ಯದಂಗಡಿ ಬಂದ್ ಮಾಡುವ ಎಚ್ಚರಿಕೆಯನ್ನೂ ಅಂಗಡಿ ಮಾಲೀಕರಿಗೆ ವಿಧಿಸಿದ್ದಾರೆ.
ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಚೌಕದೊಳಗೆ ಪಾದರಕ್ಷೆ ಬಿಟ್ಟು ದೂರ ಹೋಗಿ ಕುಳಿತ ದೃಶ್ಯಗಳೂ ಇಂದು ಮದ್ಯದಂಗಡಿಗಳ ಎದುರು ಕಂಡುಬಂತು.