

ಬೆಂಗಳೂರು: ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತೊಗೆಯಲು ಪಣತೊಟ್ಟಿರುವ ಪೊಲೀಸ್, ಸಿಸಿಬಿ, ಎನ್ಸಿಬಿ ತಂಡಕ್ಕೆ ರಾಜ್ಯದಲ್ಲಿ ನಿತ್ಯ ಮೂರ್ನಾಲ್ಕು ಕೇಸ್ಗಳು ಸಿಕ್ಕಿಬೀಳುತ್ತಲೇ ಇವೆ. ಬಗೆದಷ್ಟು ಆಳ ಎಂಬಂತಾಗಿರುವ ಡ್ರಗ್ಸ್ ಜಾಲದ ನಂಟಿನ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಕಾರಿನ ಸೀಟಿನ ಅಡಿ ಬರೋಬ್ಬರಿ 25 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿದೆ!
ಶ್ರೀಲಂಕಾ ಮತ್ತು ಮಾಲ್ಡೀವ್ಸ್ನಿಂದ ಡ್ರಗ್ಸ್ನ್ನು ಆಂಧ್ರದ ವಿಶಾಖಪಟ್ಟಣಂಗೆ ಸರಬರಾಜು ಮಾಡಿಕೊಂಡು ಅಲ್ಲಿಂದ ಬೆಂಗಳೂರು ಮತ್ತು ಕೇರಳಕ್ಕೆ ಮೂವರು ಡ್ರಗ್ಸ್ ಪೆಡ್ಲರ್ಗಳು ಪೂರೈಕೆ ಮಾಡುತ್ತಿದ್ದರು.
ನ.9ರಂದು ವಿಶಾಖಪಟ್ಟಣಂನಿಂದ ಕೇರಳಕ್ಕೆ ಕಾರಿನಲ್ಲಿ ಡ್ರಗ್ಸ್ ಸಾಗಾಟದ ಸಂಬಂಧ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಎನ್ಸಿಬಿ (ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ದಳ) ಅಧಿಕಾರಿಗಳು ದೇವನಹಳ್ಳಿ ಟೌನ್ ಗೇಟ್ ಸಮೀಪ ಪೆಡ್ಲರ್ಗಳಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿಲ್ಲ. ಕೊನೆಗೆ ಚಾಲಕನ ಸೀಟ್ ಕೆಳಗೆ ಹುಡುಕಾಟ ನಡೆಸಿದಾಗ ಹ್ಯಾಶಿಶ್ ಪತ್ತೆಯಾಗಿದೆ.
ಡ್ರಗ್ಸ್ ಸಾಗಾಟ ನಡೆಸುತ್ತಿದ್ದ ಕೇರಳ ಮೂಲದ ಆರ್.ಎಸ್.ರಂಜೀತ್, ಕೆ.ಕೆ.ಸಾರಂಗ್ ಮತ್ತು ಪಿ.ಡಿ.ಅನೇಶ್ ಎಂಬುವವರನ್ನು ಬಂಧಿಸಿದ ಎನ್ಸಿಬಿ ಅಧಿಕಾರಿಗಳು 25 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. 1 ಗ್ರಾಂ ಹ್ಯಾಶಿಶ್ ದ್ರವನ್ನು ಐದು ಬಾರಿ ಸೇವನೆ ಮಾಡುವಷ್ಟು ಗುಣಮಟ್ಟದ್ದಾಗಿದೆ. ಕೇರಳ ಮೂಲದ ಪೆಡ್ಲರ್ಗಳು ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಇವರ ಸಹಚರರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.