

ಬೆಂಗಳೂರು: ಸ್ನೇಹಿತರ ಜತೆ ಹೋಗುವುದಾಗಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಿಂದ ಯುವಕ ಹೋಗಿದ್ದ. ಅಂದು ರಾತ್ರಿ 8ರ ಸುಮಾರಿಗೆ ತಾಯಿಗೆ ಕರೆ ಮಾಡಿದ್ದ ಆತ, ಮನೆಗೆ ಬರುವುದು ತಡವಾಗಲಿದೆ ಎಂದಿದ್ದ. ಮತ್ತೆ ಆತ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ತಡರಾತ್ರಿ ಭೀಕರ ಹತ್ಯೆಯಾಗಿ ರಸ್ತೆಬದಿ ಶವವಾಗಿ ಬಿದ್ದಿದ್ದ!
ಇಂತಹದ್ದೊಂದು ಘಟನೆ ಮಾಗಡಿ ರಸ್ತೆ ಸುಮನಹಳ್ಳಿ ಸೇತುವೆ ಬಳಿ ಸಂಭವಿಸಿದೆ. ಬನಶಂಕರಿ 1ನೇ ಹಂತದ ಮಂಜುನಾಥ್(28) ಕೊಲೆಯಾದವ. ಈತ ಯಾರಬ್ನಗರದ ಸಲೂನ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಸಲೂನ್ ಶಾಪ್ ನೌಕರರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಶವವನ್ನು ಮಾಗಡಿ ರಸ್ತೆ ಸುಮನಹಳ್ಳಿ ಸೇತುವೆ ಬಳಿ ಶವ ಎಸೆದಿದ್ದಾರೆ. ಶನಿವಾರ ತಡರಾತ್ರಿ 12 ಗಂಟೆಗೆ ನಮ್ಮ-100ಗೆ ಸಾರ್ವಜನಿಕರು ಕರೆ ಮಾಡಿ ಸುಮನಹಳ್ಳಿ ಸೇತುವೆ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ಈ ಮೇರೆಗೆ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದಾಗ ಶವದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಗುರುತು ಪತ್ತೆಯಾಗಿದ್ದವು.
ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಮೊಬೈಲ್ ನಂಬರ್ ಆಧರಿಸಿ ಕುಟುಂಬ ಸದಸ್ಯರನ್ನು ಸಂಪರ್ಕ ಮಾಡಲಾಗಿದೆ. ದುಷ್ಕರ್ಮಿಗಳು ಮಂಜುನಾಥ್ನನ್ನು ಬೇರೆಕಡೆ ಹತ್ಯೆ ಮಾಡಿ ಶವವನ್ನು ಎಸೆದು ಹೋಗಿದ್ದಾರೆ. ಅರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.