

ಬೆಂಗಳೂರು: ವ್ಯಾಪಾರಿಗೆ ಲಾಂಗ್ ತೋರಿಸಿ ಹಾಡಹಗಲೇ ಸುಲಿಗೆ ಮಾಡಿದ್ದ ರೌಡಿಯನ್ನು ಬಾಣಸವಾಡಿ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ಅ.22ರಂದು ಕಾಚರಾಯಕನಹಳ್ಳಿಯಲ್ಲಿ ವ್ಯಾಪಾರಿ ಶರತ್ ಎಂಬುವರ ಅಂಗಡಿಗೆ ಹೋಗಿ ಲಾಂಗ್‌ನಿಂದ ಬೆದರಿಸಿದ್ದ ಆರೋಪಿ ಅರ್ಬಾಜ್ ಖಾನ್, ಅಂಗಡಿ ಮುಂದಿನ ವಸ್ತುಗಳನ್ನು ಜಖಂಗೊಳಿಸಿದ್ದ. 4500 ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿಯ ಮುಖಚಹರೆ ಗುರುತು ಪತ್ತೆಯಾಗಿತ್ತು.
ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರ್ಬಾಜ್ ಖಾನ್ನನ್ನು ಬಂಧಿಸಿದ್ದ ಪೊಲೀಸರು ಭಾನುವಾರ ಬೆಳಗ್ಗೆ ಲಾಂಗ್ ಬೀಸಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಿದ್ದರು. ಈ ವೇಳೆ ಆರೋಪಿ ಲಾಂಗ್ ತೆಗೆದುಕೊಂಡು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಬಾಣಸವಾಡಿ ಇನ್‌ಸ್ಪೆಕ್ಟರ್ ಜಯರಾಜ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಸೂಚಿಸಿದ್ದರು.
ಇದನ್ನು ಲೆಕ್ಕಿಸದೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಗಾಯಾಳು ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಮಡಿವಾಳ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಬರಿ ಪ್ರಕರಣಗಳಲ್ಲಿ ಅರ್ಬಾಜ್ ಖಾನ್ ಭಾಗಿಯಾಗಿದ್ದ. ಗುಣಮುಖನಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.