

ಶಿವಮೊಗ್ಗ: ಸುಮಾರು ಒಂದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೊಂಡಿದ್ದು, ಎಫ್ಐಆರ್ ಕೂಡ ದಾಖಲಿಸಿದೆ.
24 ವರ್ಷದ ಹರ್ಷನನ್ನು ಫೆ. 21ರ ರಾತ್ರಿ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಕೊಲೆ ಮಾಡಲಾಗಿತ್ತು. ಅಂದು ಹರ್ಷನನ್ನು ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ಭರ್ಜಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಬದುಕುಳಿಯಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದಿನೇದಿನೆ ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಹತ್ತು ಆರೋಪಿಗಳನ್ನು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದರು.
ಬಳಿಕ ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಎಫ್ಐಆರ್ ದಾಖಲಿಸಿಕೊಂಡಿದೆ. ಎಫ್ಐಆರ್ ವರದಿಯಲ್ಲಿ ಕೊಲೆ ಹಿಂದಿನ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ವೈಯಕ್ತಿಕ ದ್ವೇಷದಿಂದ ಹರ್ಷನನ್ನು ಕೊಲೆ ಮಾಡಲಾಗಿತ್ತು ಎಂದು ಹೇಳಲಾಗಿದ್ದರೂ, ಇದೀಗ ಮತ್ತೊಂದು ವಿಷಯ ಬಹಿರಂಗಗೊಂಡಿದೆ. ಆರೋಪಿಗಳು ಕೋಮುಗಲಭೆ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತಂದು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೊಲೆಯನ್ನು ನಡೆಸಿದ್ದರು ಎಂಬುದು ಎನ್ಐಎ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.