ಹರಿಕಥೆ ಭವಿಷ್ಯದ ಗಂಭೀರ ಚಿಂತನೆ : ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಆಶಯ : ಹರಿಕಥಾ ಸಮ್ಮೇಳನಕ್ಕೆ ಚಾಲನೆ

New Project (37)
Published on

ಮಂಗಳೂರು: ಮುಂದಿನ ಜನಾಂಗಕ್ಕೆ ಹರಿಕಥೆಯ ಆಸಕ್ತಿ ಮೂಡಿಸಲು ನಾವೇನು ಮಾಡಬಹುದು ಎಂಬ ಬಗ್ಗೆ ಸಮಾಜ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಮಾನಂದಜಿ ಹೇಳಿದರು.

ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಠ, ಷಡ್ಜ ಕಲಾಕೇಂದ್ರ ಟ್ರಸ್ಟ್ ಬೆಂಗಳೂರು ಜಂಟಿ ಸಹಯೋಗದಲ್ಲಿ ಮಂಗಳೂರು ರಾಮಕೃಷ್ಣ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಹರಿಕಥಾ ಸಮ್ಮೇಳನ-2025ಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಹಿಂದೆ ಹರಿಕಥೆಗೆ ಭಾರಿ ಜನಮನ್ನಣೆ ಸಿಗುತ್ತಿತ್ತು. ಈ ಸ್ಥಿತಿ ಮರುಕಳಿಸಬೇಕು. ಮಕ್ಕಳಲ್ಲಿ ಹರಿಕಥೆಯ ಅಭಿರುಚಿ ಮೂಡಿಸ ಬೇಕಾದುದದು ಹೆತ್ತವರ ಕರ್ತವ್ಯ. ಹರಿಕಥೆ ಉಳಿಸುವಲ್ಲಿ ಹರಿಕಥಾ ಪರಿಷತ್ತಿನ ಸಂಘಟಿತ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು.

ದಿಕ್ಸೂಚಿ ನುಡಿಗಳನ್ನಾಡಿದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹರಿಕಥೆ ದೇಶಾದ್ಯಂತ ಬೇರೆ ಬೇರೆ ರೂಪದಲ್ಲಿದೆ. ಸಮಾಜದಲ್ಲಿ ನಿಧಾನ ಸುಧಾರಣೆ ತಂದ ಸಶಕ್ತ ಮಾಧ್ಯವವಿದು. ವೇದಾಂತವನ್ನು ಸರಳವಾಗಿ ನಿರೂಪಿಸಿದ ಈ ಕಲೆ ಅವಿನಾಶಿ ಎಂದು ಹೇಳಿದರು.

ಸಮಾರಂಭದಲ್ಲಿ ಹಿರಿಯ ಹರಿದಾಸ ದೇವಕೀತನಯ ಅವರ ಕುರಿತಾದ ಕೃತಿ ‘ಮಹಾಪರ್ವ’ ಬಿಡುಗಡೆಗೊಳಿಸಿದ ಮಾತನಾಡಿದ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕಲೆಯನ್ನು ಉಳಿಸಬೇಕಾದರೆ ಸಂಘಟಿತ ಪ್ರಯತ್ನ ಮುಖ್ಯ ಎಂದರು.

ಹರಿಕಥಾ ಪರಿಷತ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿದರು. ಹರಿಕಥಾ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಹಿರಿಯ ಹರಿದಾಸ ಶಂನಾಡಿಗ, ಸಮ್ಮೇಳನದ ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಪಿ.ಗುರುದಾಸ್, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಹರಿಕಥಾ ಸಮ್ಮೇಳನ ಸಮಿತಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಸಂಚಾಲಕ ಸುಧಾಕರ ರಾವ್ ಪೇಜಾವರ ವಂದಿಸಿದರು. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ‘ತುಳುನಾಡಿನ ಹರಿಕಥಾ ಪರಂಪರೆ’ ಗೋಷ್ಠಿಯಲ್ಲಿ ಹರಿದಾಸರುಗಳಾದ ಈಶ್ವರದಾಸ ಕೊಪ್ಪೇಸರ, ಮಂಜುಳಾ ಜಿ.ರಾವ್ ಇರಾ, ಶೇಣಿ ಮುರಳಿ, ಶ್ರದ್ಧಾ ನಾಯರ್ಪಳ್ಳ ಪ್ರಬಂಧ ಮಂಡಿಸಿದರು. ಹಿರಿಯ ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಕಾರರಾದ ಗಂಗಾಧರ ಕೊಂಡೆವೂರು ಹಾಗೂ ರಾಮಚಂದ್ರ ಮಣಿಯಾಣಿ ಗೋಷ್ಠಿಯನ್ನು ನಿರ್ವಹಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹೊರಟ ಸಂರ್ಕೀತನಾ ಮೆರವಣಿಗೆಗೆ ಆಡಳಿತ ಮೊಕ್ತೇಸರ ಅರುಣ ಐತಾಳ ಚಾಲನೆ ನೀಡಿದರು. ಹರಿದಾಸ ಜಯಾನಂದ ಹೊಸದುರ್ಗ, ಉರ್ವ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ಮೊದಲಾದವರು ನೇತೃತ್ವ ನೀಡಿದರು. ಕೀರ್ತನ ಕುಟೀರದ ವಿದ್ಯಾರ್ಥಿಗಳಿಂದ ದಾಸ ಸಂಕೀರ್ತನೆ ಹಾಗೂ ಕು.ಪ್ರಣಮ್ಯ ಅವರಿಂದ ಹರಿಕಥೆ ನಡೆಯಿತು.

ಹರಿಕಥೆಗೆ ಸಿಗಲಿ ಸರ್ಕಾರದ ಪ್ರೋತ್ಸಾಹ

ಜೀವನದ ಬಗೆಗೆ ಶಾಲೆ, ಕಾಲೇಜುಗಳಲ್ಲಿಯೂ ಸಿಗದ ನೈತಿಕ ಪಾಠ ಹರಿಕಥೆಯಲ್ಲಿ ಸಿಗುತ್ತದೆ. ಹಾಗಾಗಿ, ಶಿಕ್ಷಣ ಸಂಸ್ಥೆಗಳಲ್ಲಿ ಹರಿಕಥೆಗೆ ಅವಕಾಶ ಸಿಗಬೇಕು. ಮಕ್ಕಳಲ್ಲಿ ಈ ಮಹತ್ವದ ಕಲೆಯ ಬೀಜ ಬಿತ್ತುವಂತಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಹರಿದಾಸ ಕೆ.ಮಹಾಬಲ ಶೆಟ್ಟಿ (ದೇವಕೀತನಯ) ಪ್ರತಿಪಾದಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಹರಿಕಥೆಯ ಪ್ರೇಕ್ಷಕರು ಇಂದು ಪ್ರಬುದ್ಧರಾಗಿದ್ದಾರೆ. ಹರಿಕಥೆ ಮುಗಿದ ಮೇಲೆ ಪ್ರೇಕ್ಷಕರ ಜತೆ ಸಂವಾದವೂ ನಡೆಯಬೇಕು. ಹರಿಕಥಾ ಶ್ರವಣ ಜೀವನದ ಕರ್ತವ್ಯ ಆಗಬೇಕು. ಸರ್ಕಾರ ಹರಿಕಥೆಯ ಕ್ಷೇತ್ರವನ್ನು ಪೋಷಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net