ಪುತ್ತೂರು: ಕ್ರೀಡಾಪಟುಗಳ ಸಾಧನೆಗೆ ಪೂರಕವಾದ ವ್ಯವಸ್ಥೆಗಳನ್ನು ಜೋಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ತಳಮಟ್ಟದಲ್ಲೇ ಕ್ರೀಡೆಗಳ ಅರಿವು ನೀಡುವ ಜತೆಗೆ ಮೂಲಸೌಕರ್ಯ ಲಭಿಸಬೇಕೆಂಬ ನಿಟ್ಟಿನಲ್ಲಿ ವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣ ಆಗಬೇಕಾಗಿದೆ. ೩೨ ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಪುತ್ತೂರಿನ ಅಭಿವೃದ್ಧಿಯ ಮೈಲಿಗಲ್ಲಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮುಂಡೂರು ಸಮೀಪದ ಕೆಮ್ಮಿಂಜೆ ಗ್ರಾಮದ ನೈತ್ತಾಡಿ ೧೫ ಎಕರೆ ಜಾಗ ಹಸ್ತಾಂತರ ಕಾರ್ಯಕ್ರಮದಲ್ಲಿ ಪಹಣಿ ವಿತರಿಸಿ ಮಾತನಾಡಿ, ಇನ್‌ಡೋರ್ ಹಾಗೂ ಔಟ್‌ಡೋರ್ ಕ್ರೀಡಾಂಗಣ ಸಿದ್ಧಪಡಿಸಿ, ಮಕ್ಕಳ ಆಸಕ್ತಿಯ ವಿಚಾರಗಳಿಗೆ ಬೇಕಾದ ರೀತಿಯ ಕೋಚ್ ಇಟ್ಟು ತರಬೇತಿ ನೀಡಲಾಗುವುದು. ಕ್ರೀಡಾಂಗಣದ ಸುತ್ತ ವಾಕಿಂಗ್ ಟ್ರ್ಯಾಕ್, ಪಾರ್ಕ್ ನಿರ್ಮಿಸಲಾಗುವುದು. ವಿವಿಧ ಜಾತಿಯ ಮರಗಳನ್ನು ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ನೆಡಲಾಗುವುದು. ಸರ್ಕಾರದ ೮ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆವರಣ ಗೋಡೆ, ಜಾಗ ಸಮತಟ್ಟು, ಹಾಗೂ ಚರಂಡಿ ನಿರ್ಮಾಣಕ್ಕೆ ೨ ಕೋಟಿಯ ಟೆಂಡರು, ಉಳಿದ ಮೊತ್ತದಲ್ಲಿ ಸಿಂಥಟಿಕ್ ಟ್ರ್ಯಾಕ್ ಹಾಗೂ ಗ್ಯಾಲರಿ ಹಂತ ಹಂತವಾಗಿ ನಿರ್ಮಾಣವಾಗಲಿದೆ ಎಂದರು.
ಜಾಗ ಇರುವಲ್ಲಿಗೆ ಕೇಂದ್ರದಿಂದ ಖೇಲೋ ಇಂಡಿಯಾ ಮೂಲಕ ೨೫ ಕೋಟಿ ರೂ.ವರೆಗೆ ಅನುದಾನ ನೀಡಲಾಗುತ್ತಿದ್ದು, ೨೨ ಕೋಟಿ ಪ್ರಸ್ತಾವನೆಯನ್ನು ಈಗಾಗಲೇ ನೀಡಲಾಗಿದೆ. ಇದರಲ್ಲಿ ೮ ಕೋಟಿಯಲ್ಲಿ ೫೦ ಮೀ *೨೦ ಮೀ ಅಗಲದ ಈಜುಕೊಳ ನಿರ್ಮಾಣ ಮಾಡಲಾಗುವುದು. ೩೬೫ ದಿನ ಬಳಕೆಗೆ ಯೋಗ್ಯವಾಗಿರುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ನಡೆಯಲಿದೆ. ಖಾಸಗಿ ಸಹಭಾಗಿತ್ವದ ಮೂಲಕ ಕ್ರೀಡಾಂಗಣದ ನಿರ್ವಹಣೆ ನಡೆಯಲಿದೆ. ಮುಕ್ರಂಪಾಡಿಯಿಂದ ಮುಂಡೂರಿನ ಕ್ರೀಡಾಂಗಣದವರೆಗಿನ ರಸ್ತೆಯನ್ನು ಚಥುಷ್ಪತವಾಗಿ ಪರಿವರ್ತಿಸಲಾಗುವುದು ಎಂದರು.
ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಬಿರಾವು, ಅಕ್ರಮ-ಸಕ್ರಮ ಸಮಿತಿಯ ರಾಮಣ್ಣ ಪಿಲಿಂಜ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಉಮಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಗರದ ಒಳಗೆ, ಹೊರಗೆ ಸರ್ಕಾರಿ ಜಾಗ
ಕೊಂಬೆಟ್ಟುನಲ್ಲಿರುವ ತಾಲೂಕು ಕ್ರೀಡಾಂಗಣ ಅಲ್ಲೇ ಇರಲಿದ್ದು, ೨ ಕೋಟಿ ರೂ.ಮೂಲಕ ತಡೆಗೋಡೆ ಹಾಗೂ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ನಗರದ ಒಳಗೆ ೧೬ ಎಕರೆ ಜಾಗ ಗುರುತಿಸಲಾಗಿದ್ದು, ಪೊಲೀಸ್ ಇಲಾಖೆಯ ಡಿಆರ್ ಇಲಾಖೆಗೆ ಇದನ್ನು ನೀಡುವ ಮೂಲಕ ಮಂಗಳೂರಿನಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗುವುದು. ಪುತ್ತೂರಿನ ಒಂದು ಪ್ರದೇಶದಲ್ಲಿ ೧೫೦ ಎಕರೆ ಖಾಲಿಯಿರುವುದನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು.
ಮೆಡಿಕಲ್ ಕಾಲೇಜಿ ನಿರ್ಮಾಣ
ಮೆಡಿಕಲ್ ಕಾಲೇಜಿನ ವಿಚಾರದಲ್ಲಿ ಮುಖ್ಯಮಂತ್ರಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಲಾಗಿದ್ದು, ವರ್ಷಕ್ಕೆ ೧೫೦ ಕೋಟಿ ರೂ. ನೀಡುವಂತೆ ಬೇಡಿಕೆ ಇಡಲಾಗಿದೆ. ಆಸ್ಪತ್ರೆಯ ಉಪಕರಣಗಳಿಗೆ ಎಂಆರ್‌ಪಿಎಲ್ ಸಿಎಸ್‌ಆರ್ ನಿಽಯಿಂದ ಮೂರು ವರ್ಷದಲ್ಲಿ ೧೦೦ ಕೋಟಿ ನೀಡಲು ಒಪ್ಪಿದ್ದಾರೆ. ಈಗಿರುವ ತಾಲೂಕು ಆಸ್ಪತ್ರೆಗೆ ೬೦ ಕೋಟಿ ರೂ.ಬಿಡುಗಡೆ ಹಂತದಲ್ಲಿದ್ದು, ಅದನ್ನು ಮೆಡಿಕಲ್ ಕಾಲೇಜು ಪ್ರದೇಶದ ೩೦೦ ಹಾಸಿಗೆ ಆಸ್ಪತ್ರೆಯ ನಿರ್ಮಾಣಕ್ಕೆ ಬಳಸಲಾಗುವುದು ಎಂದರು.