

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮಂಗಳವಾರ 300ನೇ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಧ್ರುವವನ್ನು ಉತ್ಪಾದಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ಸಂದರ್ಭವನ್ನು ಎಚ್ಎಎಲ್ ವಿಭಿನ್ನವಾಗಿ ಆಚರಿಸಿ ಸಂಭ್ರಮಿಸಿಕೊಂಡಿದೆ.
ಧ್ರುವ ಎಲ್ಎಎಚ್ ಬೇಡಿಕೆ ಒಪ್ಪಂದ ಯಾರ ಜತೆಗೆ ಎಷ್ಟು? 41 ಭಾರತೀಯ ಸೇನೆ 16 ಭಾರತೀಯ ನೌಕಾಪಡೆ 16 ಭಾರತೀಯ ಕರಾವಳಿ ರಕ್ಷಣಾ ಪಡೆ (ಈ ಪೈಕಿ 38 ಹೆಲಿಕಾಪ್ಟರ್ ಅನ್ನು 2022ರೊಳಗೆ ಎಚ್ಎಎಲ್ ಪೂರೈಸಬೇಕು)
ಸರಳ ಸಮಾರಂಭದಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಡಿವಿಷನ್ನ ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಶೂರೆನ್ಸ್ನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ವೈ.ಕೆ.ಶರ್ಮಾ ಅವರು 300ನೇ ಹೆಲಿಕಾಪ್ಟರ್ನ ರೋಲ್ ಔಟ್ ಸರ್ಟಿಫಿಕೇಟ್ ಅನ್ನು ಹೆಲಿಕಾಪ್ಟರ್ ಕಾಂಪ್ಲೆಕ್ಸ್ನ ಸಿಇಒ ಜಿವಿಎಸ್ ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಿಎಂಡಿ ಆರ್. ಮಾಧವನ್, ಮೊಟ್ಟ ಮೊದಲ ಬಾರಿಗೆ 1992ರ ಆಗಸ್ಟ್ 30ರಂದು ಎಎಲ್ಎಚ್ ಧ್ರುವದ ಪ್ರೊಟೋ ಟೈಪ್ ಅನಾವರಣಗೊಳಿಸಿದಲ್ಲಿಂದ ಹಿಡಿದು ಇಲ್ಲಿಯ ತನಕ ಬೆಳವಣಿಗೆ ಒಂದು ಸಾಧನೆ. ಸರಿಸಾಟಿ ಇಲ್ಲದ ಕಾರ್ಯಕ್ಷಮತೆ ಹೊಂದಿರುವ ಈ ವಿಶ್ವದರ್ಜೆಯ ಹೆಲಿಕಾಪ್ಟರ್ ಸಂಸ್ಥೆಯ ಹೆಗ್ಗುರುತಾಗಿ ಮೂಡಿದೆ. ಎಎಲ್ಎಚ್ ಮಾರ್ಕ್ I ರಿಂದ ಹಿಡಿದು ಮಾರ್ಕ್ IV ರ ತನಕದ ಬೆಳವಣಿಗೆಯೇ ಒಂದು ಸಾಧನೆ. ಹೆಲಿಕಾಪ್ಟರ್ ನಿರ್ಮಾಣದಲ್ಲಿ ಸ್ವದೇಶಿ ವಿನ್ಯಾಸ ಮತ್ತು ಅಭಿವೃದ್ಧಿಗೆ ಸಿಕ್ಕ ಉತ್ತೇಜನವೂ ಹೌದು ಎಂದು ಹೇಳಿದರು.
ಎಎಲ್ಎಚ್ 2.8 ಲಕ್ಷ ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದ ಸಾಧನೆ ಮಾಡಿದ್ದು, ಯಾವುದೇ ಸ್ಥಳ, ಯಾವುದೇ ಸಮಯ, ಸಂದರ್ಭದಲ್ಲಿ ಬಹುಪಾತ್ರಗಳನ್ನು ನಿಭಾಯಿಸಬಲ್ಲ ಹೆಲಿಕಾಪ್ಟರ್ ಆಗಿ ಈಗಾಗಲೇ ಸಾಬೀತು ಮಾಡಿದೆ ಎಂದು ಭಾಸ್ಕರ್ ಹೇಳಿದ್ರು. (ಏಜೆನ್ಸೀಸ್)