

ಮೈಸೂರು: ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕ್ರಮವನ್ನ ಹೈಕೋರ್ಟ್ ಎತ್ತಿ ಹಿಡಿದಿದ್ದು, ಮುಂದಿನ ಹೋರಾಟದ ಕುರಿತು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರು ಹಾಗೂ ಕಾನೂನು ತಜ್ಞರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಹಾಗೂ ವಿಪಕ್ಷ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಸುಪ್ರೀಂ ಕೋರ್ಟ್‌ಗೆ ಹೋದರೂ ಅಲ್ಲಿಯೂ ಮುಖಭಂಗ ಅನುಭವಿಸುವುದು ಖಚಿತ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ನೀಡಬೇಕು. ಹೈಕೋರ್ಟ್ ತೀರ್ಪು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಈಗ ಹಠ ಮಾಡುವುದರಿಂದ ಮತ್ತೆ ವೇದನೆಗೆ ಒಳಗಾಗುತ್ತೀರಿ. ಆ ಪರಿಸ್ಥಿತಿ ಬರುವುದು ಬೇಡ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕುಟುಂಬ ಮುಡಾದಿಂದ ಪಡೆದ 14 ನಿವೇಶನಗಳನ್ನು ಹಿಂತಿರುಗಿಸಿ ತನಿಖೆ ಎದುರಿಸಲು ಈ ಹಿಂದೆಯೇ ಸಲಹೆ ನೀಡಿದ್ದೆ. ಆದರೆ ಅವರು ಅದನ್ನು ಧಿಕ್ಕರಿಸಿದ್ದರು. ಪಕ್ಕದಲ್ಲಿರುವವರ ಬುದ್ಧಿವಾದವನ್ನು ಕೇಳಿ ತಮ್ಮ 50 ವರ್ಷದ ರಾಜಕೀಯವನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ.
ಕುರುಬ ಸಮುದಾಯ ಸೇರಿದಂತೆ ಅಹಿಂದ ಸಮುದಾಯಗಳು ಅವರನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದವು. ಆದರೆ, ಸಿದ್ದರಾಮಯ್ಯ ದುರಂಹಕಾರ, ಧೋರಣೆಗಳ ಮೂಲಕ ಈ ಸಮುದಾಯಗಳಿಗೆ ಮಸಿ ಬಳದಿದ್ದಾರೆ. ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳು ಈ ರಾಜ್ಯದ ಘನತೆ ಎತ್ತಿ ಹಿಡಿದಿದ್ದರು. ಅದನ್ನು ಮಣ್ಣುಪಾಲು ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.