

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆದೇಶವನ್ನು ಧಿಕ್ಕರಿಸಿ ಎಸ್.ಆರ್.ಶ್ರೀನಿವಾಸ್ ಅವರನ್ನು ಎಚ್.ಡಿ. ಕುಮಾರಸ್ವಾಮಿ ಮಂತ್ರಿ ಮಾಡಿ ಈಗ ಅವರಿಂದಲೇ ನೋವುಣ್ಣುವಂತಾಗಿದೆ ಎಂದು ತುರುವೇಕೆರೆಯ ಜೆಡಿಎಸ್ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ತಿರುಗೇಟು ನೀಡಿದ್ದಾರೆ.
ತುರುವೇಕೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸತ್ಯನಾರಾಯಣ ಅವರನ್ನು ಮಂತ್ರಿ ಮಾಡುವಂತೆ ದೇವೇಗೌಡರು ಹೇಳಿದ್ದರು. ಆದರೆ, ಕುಮಾರಸ್ವಾಮಿ ಅವರು ಶ್ರೀನಿವಾಸ್ರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಂಡರು. ಶ್ರೀನಿವಾಸ್ಗೂ ಇದು ಗೊತ್ತು ಎಂದರು.
ಸತ್ಯನಾರಾಯಣ ಅವರನ್ನು ಮಂತ್ರಿ ಮಾಡಿದ್ದರೆ ಲೋಕಸಭೆಯಲ್ಲಿ ದೇವೇಗೌಡರು ಸೋಲುತ್ತಿರಲಿಲ್ಲ. ಪರಿಷತ್ ಚುನಾವಣೆಯಲ್ಲಿ ರಮೇಶ್ ಬಾಬು, ಚೌಡರೆಡ್ಡಿ ತೂಪಲ್ಲಿನೂ ಸೋಲುತ್ತಿರಲಿಲ್ಲ. ಶ್ರೀನಿವಾಸರನ್ನು ಮಂತ್ರಿ ಮಾಡಿದ ಫಲದ ನೋವನ್ನು ಗೌಡರ ಕುಟುಂಬ ಉಣ್ಣುವಂತಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.