ಬಂಟ್ವಾಳದಲ್ಲಿ ಗ್ಯಾರಂಟಿ ಶಿಬಿರ ಯಶಸ್ವಿ : ಜಯಂತಿ ಪೂಜಾರಿ ಮಾಹಿತಿ

Published on

ಬಂಟ್ವಾಳ: ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇತ್ತೀಚೆಗೆ ತಾಲೂಕಿನ 10 ಕಡೆಗಳಲ್ಲಿ ನೋಂದಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಯಶಸ್ವಿಯಾಗಿದ್ದು, ರಾಜ್ಯಮಟ್ಟದಲ್ಲಿ ಬಂಟ್ವಾಳ ತಾಲೂಕು ಗುರುತಿಸಿಕೊಳ್ಳುವಂತಾಗಿದೆ ಎಂದು ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 576 ಫಲಾನುಭವಿಗಳು ಶಿಬಿರದಲ್ಲಿ ಭಾಗಿಯಾಗಿದ್ದು, 84 ಹೊಸ ಅರ್ಜಿಗಳು ಬಂದಿವೆ. ಬಂಟ್ವಾಳ ತಾಲೂಕಿನಲ್ಲಿ 2024ರ ಡಿಸೆಂಬರ್ ಅಂತ್ಯದವರೆಗೆ 70093 ಮಂದಿ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿದ್ದು ಇವರಲ್ಲಿ 67388 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಮೊತ್ತ ಜಮೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಶಿಬಿರದಲ್ಲಿ ಒಟ್ಟು 795 ಅರ್ಜಿಗಳು ಬಂದಿದ್ದು 538 ಅರ್ಜಿಗಳು ವಿಲೇವಾರಿಯಾಗಿದ್ದು 257 ಅರ್ಜಿಗಳು ತನಿಖಾ ಹಂತದಲ್ಲಿದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ಪೂರೈಸಿರುವ ನಿರುದ್ಯೋಗಿ ಯುವಕ ಯುವತಿಯರಿಗೆ ಜ.16ರಂದು ನೋಂದಣಿ ಪ್ರಕ್ರಿಯೆಯನ್ನು ತಾಲೂಕು ಪಂಚಾಯಿತಿ ಎಸ್‌ಜೆಎಸ್‌ಆರ್‌ವೈ ಸಭಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಯಂತಿ ಪೂಜಾರಿ ತಿಳಿಸಿದ್ದಾರೆ.

ಧರ್ಮಸ್ಥಳ-ಮಂಗಳೂರು, ಉಪ್ಪಿನಂಗಡಿ-ಮಂಗಳೂರು ಬಸ್‌ಗಳು ನಿಗದಿತ ತಂಗುದಾಣದಲ್ಲಿ ನಿಲುಗಡೆಗೊಳಿಸದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net